ನವದೆಹಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಪಾಕಿಸ್ತಾನದ ಜತೆ ಹೆಚ್ಚುತ್ತಿರುವ ಯುದ್ಧ ಉದ್ವಿಗ್ನತೆಯ ನಡುವೆಯೇ ಮಹತ್ವದ ಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವಾಲಯವು ಮೇ 7ರ ಬುಧವಾರದಂದು ದೇಶದ 244 ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ನಾಗರಿಕ ರಕ್ಷಣಾ ಅಣಕು ಕವಾಯತು (ಮಾಕ್ ಡ್ರಿಲ್) ನಡೆಸುವಂತೆ, ರಾಜ್ಯ ಗಳಿಗೆ ನಿರ್ದೇಶನ ನೀಡಿ ದೆ. 1971ರ ಬಾಂಗ್ಲಾ ವಿಮೋಚನಾ ಯುದ್ಧದ ಬಳಿಕ ಭಾರತದಲ್ಲಿ ಇಂಥ ತಾಲೀಮು ನಡೆಯುತ್ತಿರುವುದು ಇದೇ ಮೊದಲು.
ಏ.22ರಂದು ಪಹಲ್ಗಾಂನಲ್ಲಿ 26 ಜನರನ್ನು ಉಗ್ರರು ಹತ್ಯೆ ಮಾಡಿದ್ದರು. ಇವರು ಪಾಕ್ ಬೆಂಬಲಿತ ಉಗ್ರರಾದ ಕಾರಣ ದೇಶಾ ದ್ಯಂತ ಪಾಕ್ ವಿರುದ್ಧ ಯುದ್ಧ ಸಾರಬೇಕು ಎಂಬ ಕೂಗು ವ್ಯಕ್ತವಾಗಿದೆ. ಈವರೆಗೂ ಸರ್ಕಾರ ರಾಜತಾಂತ್ರಿಕ ಪ್ರತೀಕಾರ ಕ್ರಮ ಗಳನ್ನು ಕೈಗೊಂಡಿದೆ. ಈಗ ಕೇಂದ್ರ ಸರ್ಕಾರ ಅಣಕು ರಕ್ಷಣಾ ಕವಾಯತಿಗೆ ಸೂಚಿಸಿದ್ದು ಹಲವು ಬಗೆಯ ಚರ್ಚೆಗಳಿಗೆ ನಾಂದಿ ಹಾಡಿದೆ. ಗೃಹ ಸಚಿವಾಲಯದ ಪ್ರಕಾರ, ಈ ತಾಲೀಮಿನ ವೇಳೆ ಯುದ್ಧದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ವಿಧಾನವನ್ನು ಅಭ್ಯಸಿಸಲು ಸೂಚಿಸಲಾಗಿದೆ
ಕವಾಯತು ಸಮಯದಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್‌ಗಳನ್ನು ಸಕ್ರಿಯಗೊಳಿಸಲಾಗುತ್ತದೆ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ತರಬೇತಿ ನೀಡಲಾಗುತ್ತದೆ. ಇದು ಬಲು ಅಪರೂಪದ ಕ್ರಮವಾಗಿದೆ. ಗಡಿ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಸೇರಿ ವಿವಿಧ ರಾಜ್ಯಗಳಿಗೆ ಕವಾಯತಿಗೆ ಸೂಚಿಸಲಾಗಿದೆ. ಆದಾಗ್ಯೂ, ಭಯಪಡುವ ಅಗತ್ಯವಿಲ್ಲ ಮತ್ತು ಇದು ಕೇವಲ ಒಂದು ಕವಾಯತು ಎಂದು ಮೂಲಗಳು ತಿಳಿಸಿದೆ

