ಪುದುಚೇರಿ : ನ.30ರಂದು ಪುದುಚೇರಿ ಪ್ರವೇಶಿಸಿದ್ದ ಫೆಂಗಲ್ ಚಂಡಮಾರುತ ಭಾನುವಾರ ದುರ್ಬಲಗೊಂಡಿದೆ ಆದರೆ ಫೆಂಗಲ್ ಪ್ರಭಾವದಿಂದ ಸುರಿದ ಧಾರಾಕಾರ ಮಳೆ ಗಾಳಿಯಿಂದ ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ನಲುಗಿತು. ಚೆನ್ನೈನಲ್ಲಿ ವಿದ್ಯುತ್ ಸ್ಪರ್ಶಿಸಿ ಮೂವರು ಮೃತಪಟ್ಟಿದ್ದಾರೆ
ಪುದುಚೇರಿಯಲ್ಲಿ ಒಂದೇ ದಿನದಲ್ಲಿ ದಾಖಲೆಯ 46 ಸೆಂಟಿಮೀಟರ್ ಮಳೆಯಾಯಿತು. 2004ರ ಆ.31 ರಂದು ದಾಖಲಾದ 21 ಸೆಂಟಿಮೀಟರ್ ಮಳೆಯೇ ಈವರೆಗಿನ ದಾಖಲೆಯಾಗಿತ್ತು. ಭಾರೀ ಮಳೆಯಿಂದ ಬೌಲೆವಾರ್ಡ್ ಹೊರವಲಯದಲ್ಲಿರುವ ವಸತಿ ಪ್ರದೇಶಗಳು ಮುಳುಗಿದವು.
ಶನಿವಾರ ರಾತ್ರಿ 11.00 ಗಂಟೆಯಿಂದ ಹೆಚ್ಚಿನ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು ನಿವಾಸಿಗಳು ಹಲವು ಗಂಟೆಗಳ ಕಾಲ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ರಸ್ತೆಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಮಳೆಯಲ್ಲಿ ಭಾಗಶಃ ಮುಳುಗಿದ್ದವು. ಹಲವಾರು ಮನೆಗಳಿಗೆ ನೀರು ನುಗ್ಗಿ ಪರಿಸ್ಥಿತಿ ದುಸ್ಥರವಾಯಿತು. ಎಲ್ಲಾ ಅಂಗಡಿಗಳು ಮುಗ್ಗಟ್ಟುಗಳು ಮುಚ್ಚಿದ್ದವು.
ಯೋಧರ ನೆರವು :
ಭಾರತೀಯ ಸೇನೆಯ ಯೋಧರು, ದೋಣಿಗಳನ್ನು ಬಳಸಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದರು. ರಕ್ಷಣಾ ಇಲಾಖೆಯ ಪ್ರಕಟಣೆಯ ಪ್ರಕಾರ, ಕೃಷ್ಣ ನಗರ ಸೇರಿದಂತೆ ಪುದುಚೇರಿಯ ಮೂರು ವಿಭಿನ್ನ ಸ್ಥಳಗಳಿಂದ ಸುಮಾರು 200 ಜನರನ್ನು ರಕ್ಷಿಸಲಾಗಿದೆ. ತಗ್ಗು ಪ್ರದೇಶಗಳಿಂದ ಸ್ಥಳಾಂತರಿಸಲ್ಪಟ್ಟ ಜನರಿಗೆ ವಸತಿ ಕಲ್ಪಿಸಲು ಸರ್ಕಾರ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ.