ಹೊಸದಿಲ್ಲಿ : ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಡಾ. ಮನಮೋಹನ್ ಸಿಂಗ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಗುರುವಾರ ದಿಲ್ಲಿಯಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಖ್ಯಾತ ಆರ್ಥಶಾಸ್ತ್ರಜ್ಞ ಮತ್ತು ರಾಜನೀತಿಜ್ಞರಾಗಿದ್ದ ಸಿಂಗ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಗುರುವಾರ ಸಂಜೆ ದಿಲ್ಲಿಯ ಏಮ್ಸ್‌ಗೆ ಅವರನ್ನು ದಾಖಲಿಸಲಾಗಿತ್ತು.
ಸಿಂಗ್ ಅವರು ಇತ್ತೀಚಿನ ವರ್ಷಗಳಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ರಾಜಕೀಯದಿಂದ ದೂರವಿದ್ದರು. 2024ರ ಜನವರಿಯಲ್ಲಿ ನಡೆದ ಅವರ ಪುತ್ರಿಯ ಪುಸ್ತಕ ಲೋಕಾರ್ಪಣೆ ಸಮಾರಂಭವೇ ಮನಮೋಹನ್ ಸಿಂಗ್ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿತ್ತು
ಈ ವರ್ಷದ ಏಪ್ರಿಲ್‌ನಲ್ಲಿ ರಾಜ್ಯಸಭೆಯಿಂದ ಸಿಂಗ್ ನಿವೃತ್ತರಾಗಿದ್ದರು. ಮನಮೋಹನ್ 2004 -2014 ರವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಿ ಸತತ ಎರಡು ಬಾರಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮೊದಲು 1991ರಲ್ಲಿ ದಿವಂಗತ ಪಿ.ವಿ. ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಸಿಂಗ್ ದೇಶದ ಆರ್ಥಿಕತೆಗೆ ಹೊಸ ದಿಸೆ ನೀಡಿದ ಭಾರತದ ಆರ್ಥಿಕ ಉದಾರೀಕರಣದ ಶಿಲ್ಪಿ ಎನಿಸಿಕೊಂಡರು
ಅಪಾರ ವಿತ್ತಜ್ಞಾನ
ಡಾ. ಮನಮೋಹನ್ ಸಿಂಗ್ ಅವರು ಅಪಾರ ಜ್ಞಾನ ಹೊಂದಿದ್ದರೂ ಮಿತ ಭಾಷಿಯಾಗಿದ್ದರು. ಸ್ಥಿತಪ್ರಜ್ಞ ರಾಜಕಾರಣಿಯಾಗಿದ್ದ ಅವರು ಎಂದಿಗೂ ಎಲ್ಲೆಮೀರಿ ಮಾತನಾಡುತ್ತಿರಲಿಲ್ಲ
ಮೋದಿ ಸಂತಾಪ
ಭಾರತ ದೇಶ ಇದೀಗ ಮತ್ತೊಬ್ಬ ಉತ್ತಮ ನಾಯಕರನ್ನು ಕಳೆದುಕೊಂಡಿದೆ. ವಿತ್ತ ಸಚಿವರಾಗಿಯೂ ಅವರು ವಿಶೇಷ ಆರ್ಥಿಕ ಯೋಜನೆಗಳನ್ನು ರೂಪಿಸಿದ್ದಾರೆ. ಅಲ್ಲದೆ, ಅವರು ಪ್ರಧಾನಿಯಾಗಿದ್ದಾಗ ಜನರ ಜೀವನ ಅಭಿವೃದ್ಧಿ ಪಡಿಸಲು ನಿರಂತರ ಪ್ರಯತ್ನ ಪಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ