ವಾರಾಣಸಿ: ಸತತ ಮೂರನೇ ಬಾರಿಗೆ ತನ್ನನ್ನು ಲೋಕಸಭೆಗೆ ಆಯ್ಕೆ ಮಾಡಿದ ವಾರಾಣಸಿ ಕ್ಷೇತ್ರಕ್ಕೆ ಮಂಗಳವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ತಾಯಿ ಗಂಗೆ ನನ್ನನ್ನು ದತ್ತು ತೆಗೆದುಕೊಂಡಿರುವಂತಿದೆ ಎಂದು ಭಾವನಾತ್ಮಕವಾಗಿ ಹೇಳಿದರು
ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಗಂಗಾ ಮಾತೆಯು ನನ್ನನ್ನು ಆಕೆಯ ಮಡಿಲಿನಲ್ಲಿ ಇರಿಸಿಕೊಂಡಿದ್ದಾಳೆ. ನಾನು ವಾರಾಣಸಿಯ ಭಾಗವೇ ಆಗಿದ್ದೇನೆ ಎಂದರು. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸತತ ಮೂರನೇ ಅವಧಿಗೆ ಸರ್ಕಾರಗಳು ಆಯ್ಕೆಯಾಗುವುದು ಬಹಳ ಅಪರೂಪ, ಆದರೆ ಭಾರತದ ಜನರು ಇದನ್ನು ಮಾಡಿದ್ದಾರೆ. ವಾರಾಣಸಿಯ ಜನರು ನನ್ನನ್ನು ಮೂರನೇ ಬಾರಿಗೆ ಸಂಸದರಾಗಿ ಮಾತ್ರವಲ್ಲದೆ ಪ್ರಧಾನಿಯಾಗಿಯೂ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಜನರು ನೀಡಿದ ಜನಾದೇಶ ಇತಿಹಾಸ ಸೃಷ್ಟಿಸಿದೆ ಎಂದ ಪ್ರಧಾನಿ, ಹೊಸ ಸರ್ಕಾರದ ಮೊದಲ ನಿರ್ಧಾರ ರೈತರು ಮತ್ತು ಬಡವರಿಗೆ ಸಂಬಂಧಿಸಿದೆ ಎಂದು ಹೇಳಿದರು. ರೈತರು, ಮಹಿಳೆಯರು, ಯುವಜನರು ಮತ್ತು ಬಡವರು ವಿಕಾಸ ಭಾರತದ ಬಲವಾದ ಆಧಾರಸ್ತಂಭಗಳು ಎಂದು ಅವರು ಹೇಳಿದರು. ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಪಿಎಂ ಕಿಸಾನ್ ಸಮ್ಮಾನ್ ನಿಧಿಯ 17 ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ಮೊದಲ ಕಡತಕ್ಕೆ ಮೋದಿ ಸಹಿ ಹಾಕಿದ್ದರು.