63
ಹೊಸದಿಲ್ಲಿ : ಭಾರತ-ಚೀನಾ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆಗಳು ಮುಂದುವರಿದಿವೆ. ಘರ್ಷಣೆ ಮತ್ತು ಕಾರ್ಯತಂತ್ರಗಳ ಹಗ್ಗ ಜಗ್ಗಾಟದ ನಂತರ, ಉದ್ವಿಗ್ನತೆ ನಿಧಾನವಾಗಿ ಕರಗುತ್ತಿದೆ. ಚೀನಾ, ಭಾರತಕ್ಕೆ ಯೂರಿಯಾ ರಫ್ತು ನಿರ್ಬಂಧಗಳನ್ನು ಸಡಿಲಿಸುವ ನಿರ್ಧಾರ ಕೈಗೊಂಡಿದೆ. 3,00,000 ಟನ್ ಯೂರಿಯಾ ಕಳುಹಿಸುವ ಸಾಧ್ಯತೆ ಇದ್ದು ಭೌಗೋಳಿಕ ರಾಜಕೀಯ ಸಂಕೀರ್ಣತೆಗಳ ನಡುವೆಯೂ ದ್ವಿಪಕ್ಷೀಯ ಸಂಬಂಧ ಸುಧಾರಿಸುವಂತೆ ಮಾಡಿದೆ.
ಜಾಗತಿಕ ಒತ್ತಡವಿದ್ದರೂ ಸರಾಗ:
ಏಷ್ಯಾದ ಮೇಲೆ ಪರಿಣಾಮ ಬೀರುವ ಅಮೆರಿಕದ ಆಡಳಿತದ ಸುಂಕ ನೀತಿಗಳಿಂದಾಗಿ ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಚೀನಾ- ಭಾರತದ ಸುಧಾರಿಸುತ್ತಿರುವ ಸಂಬಂಧ ಗಮನ ಸೆಳೆಯುತ್ತಿದೆ. ಜಾಗತಿಕ ವ್ಯಾಪಾರದ ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ, ನೆರೆಯ ದೇಶಗಳೊಂದಿಗೆ ವ್ಯಾಪಾರ ಸಂಬಂಧ ಸ್ಥಿರಗೊಳಿಸಲು ಚೀನಾ ಯತ್ನಿಸುತ್ತಿರುವುದು ಅದರ ಒಂದು ಪ್ರಾಯೋಗಿಕ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ.

