ನವದೆಹಲಿ : ಕಾನೂನು ಸುಧಾರಣೆಯ ಮೈಲುಗಲ್ಲು ಎನ್ನಬಹುದಾದ ಮಹತ್ವದ ಬೆಳವಣಿಗೆಯೊಂದು ದೇಶದಲ್ಲಿ ಇಂದು ಜುಲೈ 1ರ ಸೋಮವಾರ ಘಟಿಸಲಿದ್ದು, ಬ್ರಿಟಿಷರ ಕಾಲದಿಂದಲೂ ಜಾರಿಯಲ್ಲಿದ್ದ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ರದ್ದಾಗಲಿವೆ. ಅವುಗಳ ಬದಲಿಗೆ ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮಗಳು ಜಾರಿಗೆ ಬರಲಿವೆ.
ಹೊಸ ಕಾಯ್ದೆಗಳು ದೇಶದ ಕಾನೂನು ಕ್ಷೇತ್ರದಲ್ಲಿ ದೊಡ್ಡ ರೂಪಾಂತರಕ್ಕೆ ಕಾರಣವಾಗಲಿವೆ. ಇವುಗಳ ಮೂಲಕ ಆಧುನಿಕ ನ್ಯಾಯ ವ್ಯವಸ್ಥೆ ಜಾರಿಗೆ ಬರಲಿದೆ. ಹೊಸ ವ್ಯವಸ್ಥೆಯಲ್ಲಿ ಶೂನ್ಯ ಎಫ್ ಐ ಆರ್ ಆನ್‌ಲೈನ್‌ನಲ್ಲೇ ಪೊಲೀಸರಿಗೆ ದೂರು ನೀಡುವುದು, ಎಸ್ ಎಂ ಎಸ್ ಮೂಲಕ ಸಮನ್ಸ್ ಜಾರಿ, ‘ಅಪರಾಧ ಸ್ಥಳದ ಕಡ್ಡಾಯ ವಿಡಿಯೋ ಚಿತ್ರೀಕರಣ ಮುಂತಾದ ನಿಯಮಗಳು ಇರಲಿವೆ. ಬದಲಾದ ಕಾಲಕ್ಕೆ ತಕ್ಕಂತೆ ಕಾನೂನು ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ.