ಹೊಸದಿಲ್ಲಿ : ಭಾರತೀಯ ಅಕ್ರಮ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡುವ ಪ್ರಕ್ರಿಯೆ ಹಿಂದಿನಿಂದಲೂ ನಡೆದಿದ್ದು, ಅಕ್ರಮವಾಗಿ ನೆಲೆಸಿರುವ ಆರೋಪದಲ್ಲಿ 2009 ರಿಂದ ಈಚೆಗೆ 15,756 ಭಾರತೀಯರನ್ನು ಅಮೆರಿಕ ಗಡಿಪಾರು ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಅಮೆರಿಕದಿಂದ ಗಡಿಪಾರಾಗಿ ಭಾರತದ ಅಮೃತಸರಕ್ಕೆ ಬಂದಿಳಿದ 104 ಭಾರತೀಯರ ಕೈ ಮತ್ತು ಕಾಲಿಗೆ ಬೇಡಿ ಹಾಕಿ ಕರೆತಂದಿದ್ದನ್ನು ಖಂಡಿಸಿ ಸಂಸತ್ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳು ಗುರುವಾರ ಪ್ರತಿಭಟನೆ ನಡೆಸಿದವು. ಇದಕ್ಕೆ ಜೈಶಂಕರ್ ಪ್ರತಿಕ್ರಿಯೆ ನೀಡಿದರು. ಗಡಿಪಾರಾದ ಅಕ್ರಮ ವಲಸಿಗರೊಂದಿಗೆ ಮಾನವೀಯವಾಗಿ ನಡೆಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅಮೆರಿಕದ ಅಧಿಕಾರಿಗಳೊಂದಿಗೆ ಭಾರತ ಸಂಪರ್ಕದಲ್ಲಿದೆ ಎಂದರು.
ತನ್ನ ರಾಷ್ಟ್ರದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ವಿಮಾನ ಮೂಲಕ ಕಳುಹಿಸಿ ಗಡಿಪಾರು ಮಾಡುವ ಪ್ರಕ್ರಿಯೆಯನ್ನು 2012 ರಿಂದಲೇ ಅಮೆರಿಕ ಆರಂಭಿಸಿದೆ. ಅಲ್ಲಿನ ಸರ್ಕಾರ ವಲಸೆ ಮತ್ತು ಕಸ್ಟಮ್ಸ್ ಜಾರಿ ಪ್ರಾಧಿಕಾರದ ಮೂಲಕ ಇದನ್ನು ವ್ಯವಸ್ಥಿತವಾಗಿಸಿದೆ ಎಂದು ಹೇಳಿದ್ದಾರೆ

