86
ಜಮ್ಮು : ಜಮ್ಮು ಮತ್ತು ಕಾಶ್ಮೀರದ ಕಿಶ್‌ವಾರ್ ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆ ಸಂಭವಿಸಿದ ಮೇಘ ಸ್ಫೋಟದಲ್ಲಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟ ಬೆನ್ನಲ್ಲೇ, ಇದೀಗ ಕರುವಾ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದೆ. ಮೇಘಸ್ಫೋಟ ದಿಂದ ಸಂಭವಿಸಿದ ಭಾರೀ ಮಳೆಯಬ್ಬರ, ಗುಡ್ಡಕುಸಿತದ ಘಟನೆಗಳಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಏಳು ಮಂದಿ ಭಾನುವಾರ ಮೃತಪಟ್ಟಿದ್ದಾರೆ.
ಜೋದ್ ಘಾಟಿಯಲ್ಲಿ ಭಾರೀ ಪ್ರವಾಹದಿಂದಾಗಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಮೃತಪಟ್ಟರೆ, ಜಂಗಲೋತೆ ಗ್ರಾಮದ ಬಗ್ರಾದಲ್ಲಿ ಗುಡ್ಡಕುಸಿದು ತಾಯಿ-ಮಗಳು ಸಾವಿಗೀಡಾಗಿದ್ದಾರೆ.
ಜೋಘಾಟಿಯಲ್ಲಿ ಪ್ರವಾಹದಿಂದಾಗಿ ಹಲವು ಮನೆಗಳು ಮುಳುಗಡೆಯಾಗಿವೆ. ಗ್ರಾಮದಲ್ಲಿ ಸೇನೆಯು ರಕ್ಷಣಾ ಕಾರ್ಯ ಚುರುಕುಗೊಳಿಸಿದ್ದು, ಈಗಾಗಲೇ ಹೆಲಿಕಾಪ್ಟರ್ ಮೂಲಕ 15 ಮಂದಿಯನ್ನು ಏರ್‌ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಿದೆ. ಪೊಲೀಸರು, ಎಸ್‌ಡಿಆರ್ ಎಫ್ ಮತ್ತು ಸ್ಥಳೀಯರ ಜತೆಗೆ ಸೇನೆಯು ರಕ್ಷಣಾ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.

