ಮಹಾಕುಂಭ ನಗರ : ಪ್ರಯಾಗ್ರಾಜ್ನ ಕುಂಭಮೇಳದಲ್ಲಿ ಕಾಲ್ತುಳಿತ ನಡೆಯಲು ಸರ್ಕಾರ ಜನ ನಿಯಂತ್ರಣಕ್ಕೆ ಸರಿಯಾದ ಕ್ರಮ ಕೈಗೊಳ್ಳದಿರುವುದು ಕಾರಣ ಎಂದು ವಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ, ಯುಪಿ ಸರ್ಕಾರ ತೆಗೆದುಕೊಂಡಿದ್ದ ತ್ವರಿತ ಸೇವೆ, ಹಸಿರು ಕಾರಿಡಾರ್ ಕ್ರಮಗಳು ಆಗಬಹುದಾಗಿದ್ದ ಬಹುದೊಡ್ಡ ಅನಾಹುತ ತಪ್ಪಿಸಿದೆ ಎಂದು ಸರ್ಕಾರ ಹೇಳಿದೆ
ಈ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ‘ ಕಾಲ್ತುಳಿತ ಸಂತ್ರಸ್ತರನ್ನು ರಕ್ಷಿಸಲು ಹಸಿರು ಕಾರಿಡಾರ್ ಮೂಲಕ 2-3 ನಿಮಿಷದಲ್ಲಿ 50ಕ್ಕೂ ಹೆಚ್ಚು ಆ್ಯಂಬುಲೆನ್ಸ್ಗಳು ಗಾಯಾಳುಗಳ ನೆರವಿಗೆ ಧಾವಿಸಿವೆ. ಸುಮಾರು 100 ಸಲ ಆ್ಯಂಬುಲೆನ್ಸ್ ಸಂಚರಿಸಿ ಜನರ ಪ್ರಾಣವನ್ನು ರಕ್ಷಿಸಿದೆ. ಅಲ್ಲದೇ ವೈದ್ಯರು ಕೂಡ 2-3 ನಿಮಿಷದಲ್ಲಿ ಘಟನಾ ಸ್ಥಳವನ್ನು ತಲುಪಿದ್ದಾರೆ. ಎನ್ ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಪೊಲೀಸರೂ ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಸಣ್ಣಪುಟ್ಟ ಗಾಯಾಳುಗಳಿಗೆ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಗಾಯಗೊಂಡರವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದು ಸಾವಿನ ಸಂಖ್ಯೆ ತಗ್ಗಿಸಲು ಕಾರಣವಾಯಿತು’ ಎಂದಿದೆ
ಅಲ್ಲದೇ ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಕೂಡ ಆಸ್ಪತ್ರೆಗಳಲ್ಲಿ ಜನರಿಗೆ ಚಿಕಿತ್ಸೆ ನೀಡಲು ಸಿದ್ದರಾಗಿದ್ದರು. ಇದು ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬರಲು ಕಾರಣ ಎನ್ನಲಾಗಿದೆ. ಹಸಿರು ಕಾರಿಡಾರ್ಗಳನ್ನು ತುರ್ತು ಸಂದರ್ಭಗಳಲ್ಲಿ ರಕ್ಷಣಾ ತಂಡಗಳು ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಲು ನಿರ್ಮಿಸಲಾಗಿತ್ತು.

