ಹೊಸದಿಲ್ಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ನಾಯಕತ್ವವು ಬುಧವಾರ ದೇವೇಂದ್ರ ಫಡ್ನವೀಸ್ ಅವರ ಹೆಸರನ್ನು ಆಯ್ಕೆ ಮಾಡುವುದರೊಂದಿಗೆ ಹಲವು ದಿನಗಳಿಂದ ಮೂಡಿದ್ದ ಅನಿಶ್ಚಿತತೆಗೆ ತೆರೆ ಬಿದ್ದಂತಾಗಿದೆ.
ಬಿಜೆಪಿ ಮುಖಂಡರು ಹೊಸದಾಗಿ ಚುನಾಯಿತರಾದ ಶಾಸಕರ ಮುಂದೆ ಫಡ್ನವೀಸ್ ಹೆಸರನ್ನು ಮಂಡಿಸಿ, ಅವರ ಅನುಮೋದನೆಯೊಂದಿಗೆ ಫಡ್ನವೀಸ್ ಆಯ್ಕೆಯನ್ನು ಅಂತಿಮಗೊಳಿಸಿತು.
ಇದಾದ ಬಳಿಕ ದೇವೇಂದ್ರ ಫಡ್ನವೀಸ್ ಬುಧವಾರ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ ಮಹಾಯುತಿ ಎರಡನೇ ಅವಧಿಯ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಇದರೊಂದಿಗೆ ಫಡ್ನವೀಸ್ ಮೂರನೇ ಬಾರಿಗೆ ಮುಖ್ಯಮಂತ್ರಿ ಗಾದಿಯೇರುವುದು ಸ್ಪಷ್ಟವಾಗಿದೆ.
ಇದೇ ವೇಳೆ ಉಸ್ತುವಾರಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಉಪ ಮುಖ್ಯಮಂತ್ರಿಯಾಗಿ ಸರ್ಕಾರವನ್ನು ಸೇರುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶಿಂಧೆ ಅವರನ್ನು ಸಂಪುಟಕ್ಕೆ ಸೇರುವಂತೆ ವಿನಂತಿಸಿರುವುದಾಗಿ ಹೇಳಿದ ದೇವೇಂದ್ರ ಫಡ್ನವೀಸ್, ಅವರು ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದರು. ಆದರೆ ಆ ಪಾತ್ರವೇನು ಎಂಬುದರ ಬಗ್ಗೆ ಹೇಳಲಿಲ್ಲ.

