ಹೊಸದಿಲ್ಲಿ: ಶಿರೋಮಣಿ ಅಕಾಲಿದಳದ ಮುಖಂಡ ಸುಖ್‌ಬೀರ್ ಸಿಂಗ್ ಬಾದಲ್ ಅವರು ಅಮೃತಸರದಲ್ಲಿ ಸೇವೆ ನಡೆಸುತ್ತಿದ್ದಾಗ ದುಷ್ಕರ್ಮಿಯೊಬ್ಬ ಹತ್ತಿರದಿಂದ ಗುಂಡು ಹಾರಿಸಿದ್ದಾನೆ. ಸೇವಾದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಗುಂಡು ಗೋಡೆಗೆ ತಗುಲಿದ್ದು, ಗಾಲಿ ಕುರ್ಚಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾದಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾದಲ್ ಮತ್ತು ಇತರ ಎಸ್ ಎಡಿ ನಾಯಕರಿಗೆ ಅಕಾಲ್ ತಖ್ ಘೋಷಿಸಿದ ತಂಖಾ (ಧಾರ್ಮಿಕ ಶಿಕ್ಷೆ) ಅನುಸಾರ ಸೇವಾದಾರರಾಗಿ ಸೇವೆ ನಡೆಸುತ್ತಿದ್ದರು.
ಕಾಲು ಮುರಿತದಿಂದ ಗಾಲಿ ಕುರ್ಚಿಯಲ್ಲಿ ಕುಳಿತಿದ್ದ ಬಾದಲ್ ಕಡೆಗೆ ಚೌರಾ ನಿಧಾನವಾಗಿ ಹೋಗಿ ಆತನ ಜೇಬಿನಿಂದ ಬಂದೂಕನ್ನು ಹೊರತೆಗೆದು ಶೂಟ್ ಮಾಡಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಬಾದಲ್ ಬಳಿ ನಿಂತಿದ್ದ ಸರಳ ಉಡುಪು ಧರಿಸಿದ ಪೊಲೀಸ್ ಅಧಿಕಾರಿಯೊಬ್ಬರು ತಕ್ಷಣ ಮಧ್ಯಪ್ರವೇಶಿಸಿ ದಾಳಿಕೋರನ ಕೈಗಳನ್ನು ಹಿಡಿದರು. ಗಲಾಟೆಯಲ್ಲಿ ಬಾದಲ್ ಅವರ ಹಿಂದಿನ ಗೋಡೆಗೆ ಗುಂಡು ತಗುಲಿತು, ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಶೂಟರ್ ಅನ್ನು ಡೇರಾ ಬಾಬಾ ನಾನಕ್ ನಿವಾಸಿ ಮತ್ತು ಮಾಜಿ ಖಲಿಸ್ತಾನ್ ಪ್ರತ್ಯೇಕತಾವಾದಿ ನರೈನ್ ಸಿಂಗ್ ಚೌರಾ ಎಂದು ಪೊಲೀಸರು ಗುರುತಿಸಿದ್ದಾರೆ.
ಸದ್ಯ ಆತನನ್ನು ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ. ಪೊಲೀಸರ ಜಾಗರೂಕತೆಯಿಂದಾಗಿ ಬಾದಲ್ ಮೇಲಿನ ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ಅಮೃತಸರ ಪೊಲೀಸ್ ಆಯುಕ್ತ ಗುರ್ ಪ್ರೀತ್ ಸಿಂಗ್ ಭುಲ್ಲರ್ ಹೇಳಿದ್ದಾರೆ.

