ಮುಂಬೈ : ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಲಯಕ್ಕೆ ಮರಳಲು ನೆರವಾಗಿದ್ದ ಗ್ಯಾರಂಟಿ ಯೋಜನೆಗಳು ಮಹಾರಾಷ್ಟ್ರದಲ್ಲಿಯೂ ಕೈ ಹಿಡಿಯಬಹುದು ಎನ್ನುವ. ನಿರೀಕ್ಷೆಯಿಂದ ಮಹಾರಾಷ್ಟ್ರ ದಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ಘೋಷಿಸಿತ್ತು. ಆದರೆ ಮಹಾರಾಷ್ಟ್ರದ ಮತದಾರರು ಭರಪೂರ ಉಚಿತ ಯೋಜನೆಗಳಿಗೆ ಮಣೆ ಹಾಕಲಿಲ್ಲ.
ಚುನಾವಣೆಗೂ ಮುನ್ನ ಮುಂಬೈನಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ಈ ಪ್ರಣಾಳಿಕೆಯಲ್ಲಿ ಕರ್ನಾಟಕದ ಮಾದರಿಯಲ್ಲಿಯೇ ಹಲವು ಉಚಿತ ಯೋಜನೆಗಳನ್ನು ಘೋಷಿಸಲಾಗಿತ್ತು. ಕರ್ನಾಟಕದ ಶಕ್ತಿ ಯೋಜನೆಯಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಕರ್ನಾಟಕದಲ್ಲಿರುವ ಗೃಹಲಕ್ಷ್ಮಿ ಯೋಜನೆಯಂತೆ, ಮಹಿಳೆಯರಿಗೆ ಮಾಸಿಕ 3 ಸಾವಿರ ರು. ಸಹಾಯಧನ, ರೈತರಿಗೆ 3 ಲಕ್ಷದವರೆಗೆ ರೈತರ ಸಾಲ ಮನ್ನಾ ಸಾಲ ಕಟ್ಟಿದರೆ 50 ಸಾವಿರ ರು. ಪ್ರೋತ್ಸಾಹ ಧನ, ಎಲ್ಲರಿಗೂ 25 ಲಕ್ಷ ರು.ರವರೆಗೆ ಆರೋಗ್ಯ ಮತ್ತು ಉಚಿತ ಔಷಧಿ ವಿತರಣೆ, ನಿರುದ್ಯೋಗಿಗಳಿಗೆ ಮಾಸಿಕ 4 ಸಾವಿರ ಸರ್ಕಾರದಿಂದ ನೀಡುವ ಯೋಜನೆಗಳನ್ನು ಘೋಷಿಸಿತ್ತು.
ಈ ಉಚಿತ ಯೋಜನೆಗಳು ಮತದಾರರ ಮನ ಗೆಲ್ಲಲು ಸಾಧ್ಯವಾಗಬಹುದು ಎನ್ನುವ ನಿರೀಕ್ಷೆ ಕಾಂಗ್ರೆಸ್ ನಾಯಕರದ್ದಾಗಿತ್ತು. ಆದರೆ ಮತದಾರರು” ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಶಾಕ್ ನೀಡಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಅತ್ಯಂತ ಕಳಪೆ ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಮುಜುಗರಕ್ಕೀಡಾಗಿದೆ