ನವದೆಹಲಿ : ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ಅಪರೇಷನ್ ಸಿಂದೂರವನ್ನು ಬಲವಾಗಿ ಸಮರ್ಥಿಸಿಕೊಂಡು ಪಾಕಿಸ್ತಾನ ಹಾಗೂ ಪ್ರತಿ ಪಕ್ಷಗಳ ಮೇಲೆ ಹರಿತ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಭಯೋತ್ಪಾದನೆ ವಿರುದ್ಧ ಭಾರತ ತನ್ನ ರಕ್ಷಣೆಗೆ ಕ್ರಮ ಕೈಗೊಳ್ಳುವುದನ್ನು ಜಗತ್ತಿನ ಯಾವುದೇ ದೇಶ ತಡೆದಿಲ್ಲ ಎಂದಿದ್ದಾರೆ.
ಈ ಮೂಲಕ ಪಾಕಿಸ್ತಾನ ಮನವಿ ಮಾಡಿದ ನಂತರ ಮೇ 1 ರಂದು ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಯಿತು ಎಂಬ ಸರ್ಕಾರದ ನಿಲುವನ್ನು ಪುನರುಚ್ಚರಿಸಿದ್ದಾರೆ ಹಾಗೂ ನಾನು ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದ್ದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ 27 ಹೇಳಿಕೆಗಳನ್ನು ಪರೋಕ್ಷವಾಗಿ ತಿರಸ್ಕರಿಸಿದ್ದಾರೆ.
ಇದೇ ವೇಳೆ, ಟ್ರಂಪ್ ಹೇಳಿಕೆಯನ್ನು ಮುಂದಿಟ್ಟುಕೊಂಡು ಸ್ಪಷ್ಟನೆಗೆ ಆಗ್ರಹಿಸುತ್ತಿದ್ದ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳಿಗೂ ಎದಿರೇಟು ನೀಡಿದ್ದಾರೆ.
ಆಪರೇಷನ್ ಸಿಂದೂರದ ಮೇಲೆ 2 ದಿನದಿಂದ ಲೋಕಸಭೆಯಲ್ಲಿ ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿ ಮಾತನಾಡಿದ ಮೋದಿ, ‘ಆಪರೇಷನ್ ಸಿಂದೂರಕ್ಕೆ ಇಡೀ ವಿಶ್ವದಿಂದ ಬೆಂಬಲ ಸಿಕ್ಕಿತು. ಆದರೆ ಕಾಂಗ್ರೆಸ್ ದೇಶದ ಸೈನಿಕರ ಶೌರ್ಯದ ಹಿಂದೆ ನಿಲ್ಲಲಿಲ್ಲ. ಕಾಂಗ್ರೆಸ್ ಈಗ ಮಾತ್ರ ಅಲ್ಲ. ಕಾರ್ಗಿಲ್ ಯುದ್ಧದಲ್ಲಿ ಭಾರತ ಗೆದ್ದಾಗಲೂ ಸಂಭ್ರಮಿಸಿರಲಿಲ್ಲ’ ಎಂದು ಕಿಡಿಕಾರಿದರು

