ಬ್ಯಾಂಕಾಕ್ : ರಾಮಾಯಣದ ಕಥೆಗಳು ಥಾಯ್ ಜನರ ಜೀವನದ ಒಂದು ಭಾಗವಾಗಿದೆ ಎಂದು ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಥೈಲ್ಯಾಂಡ್ ನಡುವಿನ ಸಂಬಂಧ ಶತಮಾನಗಳಷ್ಟು ಹಳೆಯದಾಗಿದ್ದು ಉಭಯ ದೇಶಗಳು ಆಳವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ನಂಟಿನ್ನು ಹೊಂದಿವೆ ಎಂದು ಹೇಳಿದ್ದಾರೆ.
ಬಿಮ್ಸ್‌ಸ್ಟಿಕ್ ಶೃಂಗಸಭೆಯಲ್ಲಿ ಭಾಗವಹಿಸಲು ಥೈಲ್ಯಾಂಡ್‌ನಲ್ಲಿರುವ ಮೋದಿ, ಬೌದ್ಧ ಧರ್ಮದ ಹರಡುವಿಕೆಯು ನಮ್ಮ ಜನರನ್ನು ಸಂಪರ್ಕಿಸಿದೆ. ಅಯುತ್ತಾಯದಿಂದ ನಳಂದದವರೆಗೆ ಬುದ್ದಿಜೀವಿಗಳ ವಿನಿಮಯ ನಡೆದಿದೆ ಎಂದಿದ್ದಾರೆ.

ದ್ವಿಪಕ್ಷೀಯ ಪಾಲುದಾರಿಕೆ ವೃದ್ಧಿ :
ಇದಕ್ಕೂ ಮುನ್ನ, ದ್ವಿಪಕ್ಷೀಯ ಸ್ನೇಹಕ್ಕೆ ಹೊಸ ಹುರುಪು ತುಂಬುತ್ತಾ, ಪ್ರಧಾನಿ ಮೋದಿ ಅವರು ಥೈಲ್ಯಾಂಡ್ ಪ್ರಧಾನಿ ಪೇಟೊಂಗ್ಟಾರ್ನ್ ಶಿನವಾತ್ರಾ ಅವರೊಂದಿಗೆ ಫಲಪ್ರದ ಸಭೆ ನಡೆಸಿದರು. ಉಭಯ ನಾಯಕರು ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳ ಬಗ್ಗೆ ಚರ್ಚಿಸಿದರು. ದ್ವಿಪಕ್ಷೀಯ ಸಂಬಂಧಗಳನ್ನು ವ್ಯೂಹಾತ್ಮಕ ಪಾಲುದಾರಿಕೆಯಾಗಿ ಉನ್ನತೀಕರಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಭಾರತ ಮತ್ತು ಥೈಲ್ಯಾಂಡ್ ವಿವಿಧ ವಲಯಗಳಲ್ಲಿ ಜ್ಞಾಪಕ ಪತ್ರಗಳನ್ನು ವಿನಿಮಯ ಮಾಡಿಕೊಂಡವು. ಈ ತಿಳಿವಳಿಕಾ ಒಡಂಬಡಿಕೆಗಳಲ್ಲಿ ಭಾರತ-ಥೈಲ್ಯಾಂಡ್ ವ್ಯೂಹಾತ್ಮಕ ಪಾಲುದಾರಿಕೆ ಸ್ಥಾಪನೆ ಕುರಿತ ಜಂಟಿ ಘೋಷಣೆಯೂ ಸೇರಿದೆ

