Home » ವಿಮಾನ ದುರಂತ ಸ್ಥಳಕ್ಕೆ ಮೋದಿ ಭೇಟಿ : ಸ್ಥಳ ಪರಿಶೀಲನೆ
 

ವಿಮಾನ ದುರಂತ ಸ್ಥಳಕ್ಕೆ ಮೋದಿ ಭೇಟಿ : ಸ್ಥಳ ಪರಿಶೀಲನೆ

by Kundapur Xpress
Spread the love

ಅಹಮದಾಬಾದ್ : ಪ್ರಧಾನಿ ಮೋದಿ ಅವರು ಶುಕ್ರವಾರ ಅಹಮದಾಬಾದ್‌ಗೆ ಭೇಟಿ ನೀಡಿ ವಿಮಾನ ದುರಂತದ ಸ್ಥಳ ಪರಿಶೀಲಿಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಘಟನೆ ಕುರಿತು ಮಾಹಿತಿ ಪಡೆದರು. ದುರಂತದಲ್ಲಿ ಬಲಿಯಾದ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮನೆಗೂ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ವಿಮಾನ ನಿಲ್ದಾಣದಿಂದ ದುರಂತ ಸ್ಥಳಕ್ಕೆ ತೆರಳಿದ ಪ್ರಧಾನಿ ಮೋದಿ ಸುಮಾರು 20 ನಿಮಿಷ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ವಿಮಾನಯಾನ ಸಚಿವ ರಾಮ್ ಮೋಹನ ನಾಯ್ಡು, ಗುಜರಾತ್‌ನ ಗೃಹ ಸಚಿವ ಹರ್ಷ್  ಅವರು ವಿಮಾನ ಟೇಕ್ ಆಫ್ ಆದ ಬಳಿಕ ಇಲ್ಲಿನ ಬಿ.ಜೆ.ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ಹೇಗೆ ಪತನವಾಯಿತು ಎಂಬುದನ್ನು ವಿವರಿಸಿದರು.

ತರುವಾಯ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ನಗರದ ಆಸ್ಪತ್ರೆಗೆ ತೆರಳಿದ ಮೋದಿ, ದುರ್ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್ ಅವರ ಆರೋಗ್ಯ ವಿಚಾರಿಸಿದರು. ಬಳಿಕ ವೈದ್ಯರನ್ನು ಭೇಟಿಯಾಗಿ ಉಳಿದ 25 ಗಾಯಾಳುಗಳ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಪಡೆದರು.

ಸುಮಾರು 10 ನಿಮಿಷ ಆಸ್ಪತ್ರೆಯಲ್ಲಿ ಕಳೆದ ಪ್ರಧಾನಿ, ಆ ನಂತರ ಏರ್‌ಪೋರ್ಟ್ ಸಮೀಪದ ಗುಜ್ ಸೈಲ್ ಕಟ್ಟಡಕ್ಕೆ ತೆರಳಿ ಗುಜರಾತ್‌ನ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದರು. ಇದೇ ವೇಳೆ ನಾಗರಿಕ ವಿಮಾನಯಾನ ಅಧಿಕಾರಿಗಳು ಘಟನೆ ಕುರಿತು ಪ್ರಧಾನಿಗೆ ವಿವರಣೆ ನೀಡಿದರು.

ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಮತ್ತು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಈ ವೇಳೆ ಉಪಸ್ಥಿತರಿದ್ದರು.

 

Related Articles

error: Content is protected !!