ಹೊಸದಿಲ್ಲಿ : ರಾಷ್ಟ್ರಪತಿ ದೌಪದಿ ಮುರ್ಮು ಅವರಿಂದ ಶಿಕ್ಷಕರ ದಿನದಂದು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಸ್ವೀಕರಿಸಿದ 82 ಶಿಕ್ಷಕರನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರದ ಮಹತ್ವದ ಬಗ್ಗೆ ಮಾತನಾಡಿದ ಪ್ರಧಾನಿ, ವಿಕಸಿತ ಭಾರತಕ್ಕಾಗಿ ಇಂದಿನ ಯುವ ಜನರನ್ನು ಸಿದ್ಧಪಡಿಸುವ ಜವಾಬ್ದಾರಿ ಶಿಕ್ಷಕರ ಕೈಯಲ್ಲಿದೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಮತ್ತು ಶಿಕ್ಷಣದ ಮೇಲೆ ಅದರ ಪ್ರಭಾವದ ಬಗ್ಗೆ ಚರ್ಚಿಸಿದ ಅವರು, ಮಾತೃಭಾಷೆಯಲ್ಲಿ ಕಲಿಕೆಯ ಮಹತ್ವದ ಬಗ್ಗೆ ಮಾತನಾಡಿದರು
ಸ್ಥಳೀಯ ಜಾನಪದ ಕಥೆಗಳನ್ನು ತಮ್ಮ ಪಾಠಗಳಲ್ಲಿ ಬಳಸಿಕೊಳ್ಳಲು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಪರಿಚಯಿಸುವಂತೆ ಮೋದಿ ಶಿಕ್ಷಕರನ್ನು ಪ್ರೋತ್ಸಾಹಿಸಿದರು. ಭಾರತದ ವೈವಿಧ್ಯತೆಯನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಪ್ರವಾಸಗಳನ್ನು ಆಯೋಜಿಸಬಹುದು. ಇದು ಸ್ಥಳೀಯ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಸಹಕಾರಿ ಎಂದು ಮೋದಿ ಸಲಹೆ ನೀಡಿದರು.