ನವದೆಹಲಿ : ವಕ್ಸ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತಿತರ ಕಡೆ ಇತ್ತೀಚೆಗೆ ನಡೆದ ಹಿಂಸಾಚಾರ ಕುರಿತು ಬಾಂಗ್ಲಾದೇಶ ನೀಡಿದ ಹೇಳಿಕೆಗೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. ನಮ್ಮ ವಿಚಾರದಲ್ಲಿ ಮಾತನಾಡುವ ಮೊದಲು ಬಾಂಗ್ಲಾದೇಶ ತನ್ನ ನೆಲದಲ್ಲಿ ನಡೆಯುತ್ತಿರುವ ‘ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಕುರಿತು ಗಮನಹರಿಸಲಿ ಎಂದು ತಿರುಗೇಟು ನೀಡಿದೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಅವರ ಮಾಧ್ಯಮ ಕಾರ್ಯದರ್ಶಿ ಶಫೀಕುಲ್ ಆಲಂ ಅವರು, ಮುರ್ಷಿದಾಬಾದ್ ಗಲಭೆಯಲ್ಲಿ ತನ್ನ ಪಾತ್ರ ಇಲ್ಲ ಭಾರತ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಮುಸ್ಲಿಂ ಅಲ್ಪಸಂಖ್ಯಾತರ ಹಕ್ಕನ್ನು ರಕ್ಷಿಸಬೇಕು ಎಂದು ಹೇಳಿಕೆ ನೀಡಿದ್ದರು
ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ಸಚಿವಾಲಯವು, ನಾವು ಪಶ್ಚಿಮ ಬಂಗಾಳದ ಘಟನೆ ಕುರಿತು ಬಾಂಗ್ಲಾ ಹೇಳಿಕೆಯನ್ನು ಖಂಡಿಸುತ್ತೇವೆ. ಇದು ಬಾಂಗ್ಲಾ ದೇಶದಲ್ಲಿನ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಕುರಿತು ಭಾರತದ ಕಳವಳಕ್ಕೆ ತಿರುಗೇಟು ನೀಡುವ ಅವಿವೇಕದ ಪ್ರಯತ್ನವಾಗಿದೆ. ಅಲ್ಲಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಎಸಗಿದವರು ಮುಕ್ತವಾಗಿ ಓಡಾಡುತ್ತಿದ್ದಾರೆ ಎಂದು ಪ್ರತ್ಯುತ್ತರ ನೀಡಿದೆ. ಜತೆಗೆ, ಅನಗತ್ಯ ಹೇಳಿಕೆ ನೀಡುವ ಬದಲು ಬಾಂಗ್ಲಾದೇಶ ಮೊದಲು ತನ್ನ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡಲಿ ಎಂದು ಕಿಡಿಕಾರಿದೆ.

