ನವದೆಹಲಿ : ‘ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯವು ದೆಹಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರನ್ನು ‘ಆರೋಪಿ ನಂ.1 ಮತ್ತು ರಾಹುಲ್ ಗಾಂಧಿ ಅವರನ್ನು ಆರೋಪಿ ನಂ.2 ಎಂದು ಹೆಸರಿಸಿದೆ. ಇದರಿಂದಾಗಿ ಕಾಂಗ್ರೆಸ್ ಅಧಿನಾಯಕರಿಗೆ ತೀವ್ರ ಕಾನೂನು ಸಂಕಷ್ಟ ಎದುರಾಗಿದೆ.
ಕೆಲವು ದಿನಗಳ ಹಿಂದಷ್ಟೇ ಇದೇ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಷೇರುದಾರರಾಗಿರುವ ಯಂಗ್ ಇಂಡಿಯಾ ಕಂಪನಿಗೆ ಸೇರಿದ 700 ಕೋಟಿ ರು.ಮೌಲ್ಯದ ಆಸ್ತಿ ಜಪ್ತಿಗೆ ಇ.ಡಿ. ನೋಟಿಸ್ ಜಾರಿ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಗಾಂಧಿ ಕುಟುಂಬದ ಇಬ್ಬರು ಹಿರಿಯರನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ಒಂದು ವೇಳೆ ಆರೋಪ ಸಾಬೀತಾದರೆ ಗರಿಷ್ಠ 7 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿರುತ್ತದೆ.
ಪ್ರಕರಣವೊಂದರಲ್ಲಿ ಸೋನಿಯಾ ಮತ್ತು ರಾಹುಲ್ ಅವರನ್ನು ಜಂಟಿ-ಆರೋಪಿಯಾಗಿ ಹೆಸರಿಸಿದ ಮೊದಲ ಉದಾಹರಣೆ ಇದಾಗಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇದನ್ನು ರಾಜಕೀಯ ಮತ್ತು ದ್ವೇಷದ ಕ್ರಮ ಎಂದು ಕಿಡಿಕಾರಿದ್ದು, ಇಂದು ಬುಧವಾರ ದೇಶವ್ಯಾಪಿ ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಇ.ಡಿ. ಕಚೇರಿಗಳ ಎದುರು ಪ್ರತಿಭಟನೆಗೆ ನಿರ್ಧರಿಸಿದೆ

