ಹೊಸದಿಲ್ಲಿ: ಪ್ರತಿಪಕ್ಷಗಳ ಆಕ್ಷೇಪದ ನಡುವೆಯೇ ಕೇಂದ್ರ ಸರ್ಕಾರ, ಅತ್ಯಂತ ಮಹತ್ವದ ವಕ್ಸ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಜಂಟಿ ಸಂಸದೀಯ ಸಮಿತಿ ಪರಿಶೀಲನೆಗೂ ಒಪ್ಪಿಸಿದೆ. ಇದರ ಜತೆಗೆ ಮುಸಲ್ಮಾನ್ ವಕ್ಸ್ ರದ್ದು ಮಸೂದೆ 2024 ಅನ್ನು ಮಂಡಿಸಲಾಯಿತು.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿದ್ದು, ಇಡೀ ವಕ್ಸ್ ಮಂಡಳಿಯನ್ನು ಮಾಫಿಯಾ ವಶಪಡಿಸಿಕೊಂಡಿದ್ದು ಅದರಿಂದ ಹೊರತರಬೇಕಾಗಿದೆ ಎಂದರು. ಅಲ್ಲದೆ, ಯಾವುದೇ ಧಾರ್ಮಿಕ ಸಂಸ್ಥೆಯ ಸ್ವಾತಂತ್ರ್ಯದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲಎಂದೂ ಭರವಸೆ ನೀಡಿದರು.
ಆದರೆ, ಈ ತಿದ್ದುಪಡಿ ಮಸೂದೆಯು ಅತ್ಯಂತ ಕ್ರೂರ ಮತ್ತು ಧಾರ್ಮಿಕ ಆಧಾರದ ಮೇಲೆ ದೇಶ ವಿಭಜಿಸುವ ಪ್ರಯತ್ನವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಕೇಂದ್ರ ಸರ್ಕಾರ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿತು.