ಹೊಸದಿಲ್ಲಿ : ವಿಪಕ್ಷಗಳು ಜಾತಿ ಸೋಗಲ್ಲಿ ಸಮಾಜದಲ್ಲಿ ವಿಷಬೀಜ ಬಿತ್ತಲು ಹುನ್ನಾರ ನಡೆಸಿವೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಗ್ರಾಮೀಣ ಸಂಸ್ಕೃತಿ, ಪರಂಪರೆಗಳ ಬಲಪಡಿಸುವ ನಿಟ್ಟಿನಲ್ಲಿ ಇಂತಹ ಷಡ್ಯಂತ್ರಗಳನ್ನು ವಿಫಲಗೊಳಿಸುವಂತೆ ಜನರಿಗೆ ಕರೆ ನೀಡಿದ್ದಾರೆ.
2047ಕ್ಕೆ ವಿಕಸಿತ ಭಾರತದ ಕನಸಿನ ಸಾಕಾರದಲ್ಲಿ ಗ್ರಾಮಗಳ ಪಾತ್ರ ನಿರ್ಣಾಯಕ ತನ್ನ ಸರ್ಕಾರ 2014 ರಿಂದಲೇ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡುತ್ತಾ ಬಂದಿದೆ ಎಂದು ಗ್ರಾಮೀಣ ಭಾರತ ಮಹೋತ್ಸವ ಉದ್ಘಾಟಿಸಿ ನುಡಿದರು. ಕೆಲವರು ಜಾತಿ ಹೆಸರಲ್ಲಿ ಸಮಾಜದಲ್ಲಿ ವಿಷಬೀಜ ಬಿತ್ತಲು ಶ್ರಮಿಸುತ್ತಿರುವುದು, ತನ್ಮೂಲಕ ಸಾಮಾಜಿಕ ಚೌಕಟ್ಟನ್ನೇ ದುರ್ಬಲಗೊಳಿಸಲು ಹುನ್ನಾರ ನಡೆಸಿರು ವುದು ತೀರಾ ಹೇಯ ಎಂದರು. ಆ ಮೂಲಕ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಇಂಡಿ ಕೂಟದ ಮತ್ತಿತರ ಕೆಲವು ನಾಯಕರನ್ನು ಪ್ರಧಾನಿ ತರಾಟೆಗೆತ್ತಿಕೊಂಡರು.
ವಿಪಕ್ಷ ನಾಯಕರಾದ ರಾಹುಲ್ ಮತ್ತು ಅಖಿಲೇಶ್ ಯಾದವ್ ಜಾತಿ ಗಣತಿಗಾಗಿ ನಿರಂತರ ಆಗ್ರಹಿಸುತ್ತಿದ್ದಾರೆ ಎಂದು ಬೊಟ್ಟು ಮಾಡಿದ ಪ್ರಧಾನಿ ಮೋದಿ, 2014ರಿಂದ ನಾನು ನಿರಂತರವಾಗಿ ಗ್ರಾಮೀಣ ಭಾರತದ ಸೇವೆಯಲ್ಲಿದ್ದೇನೆ. ಗ್ರಾಮೀಣ ಭಾರತದ ಜನರಿಗೆ ಘನತೆ ಗೌರವಗಳ ಬದುಕನ್ನು ಕಲ್ಪಿಸುವುದು ನನ್ನ ಸರ್ಕಾರದ ಧೈಯವಾಗಿದೆ. ಸಬಲೀಕೃತ ಗ್ರಾಮೀಣ ಭಾರತ, ಗ್ರಾಮೀಣರಿಗೆ ತುಂಬು ಅವಕಾಶಗಳ ಕಲ್ಪಿಸುವುದು ಮತ್ತು ತನ್ಮೂಲಕ ಗ್ರಾಮೀಣರ ವಲಸೆಯನ್ನು ಗಣನೀಯವಾಗಿ ಕುಗ್ಗಿಸುವುದು ಮತ್ತು ಗ್ರಾಮೀಣರ ಬದುಕನ್ನು ಆದಷ್ಟು ಸುಗಮಗೊಳಿಸುವುದು ತನ್ನ ಸರ್ಕಾರದ ಗುರಿ ಎಂದರು.