ನವಸಾರಿ (ಗುಜರಾತ್) : ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಹಿಳೆಯರ ಸುರಕ್ಷೆಗೆ ವಿಶೇಷ ಆದ್ಯತೆ ನೀಡಿದೆ. ಅತ್ಯಾಚಾರದಂತಹ ಹೀನ ಅಪರಾಧಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ರೀತಿಯಲ್ಲಿ ಕಾನೂನುಗಳಿಗೆ ತಿದ್ದುಪಡಿ ತಂದಿದ್ದು, ದೇಶದ ಸರ್ವ ಕ್ಷೇತ್ರಗಳಲ್ಲೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದೇವೆ. ಭಾರತವೀಗ ಮಹಿಳೆಯರ ನೇತೃತ್ವದಲ್ಲಿ ಅಭಿವೃದ್ಧಿಯ ಪಥ ಹಿಡಿದು ಸಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನವಸಾರಿ ಜಿಲ್ಲೆಯ ವಾನ್ವಿ ಬೋರ್ಸಿ ಗ್ರಾಮದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಲಖ್ ಪತಿ ದೀದಿಯರೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು. ಮಹಿಳಾ ದಿನದ ಅಂಗವಾಗಿ ಪ್ರಧಾನಿ ಮೋದಿಯವರು ತಮ್ಮ ಸಾಮಾಜಿಕ ಖಾತೆಗಳ ನಿರ್ವಹಣೆಯನ್ನು ಮಹಿಳೆಯರಿಗೆ ವಹಿಸಿಕೊಟ್ಟು ಗಮನ ಸೆಳೆದಿದ್ದಾರೆ.
ಇಂದು ಹೆಣ್ಣುಮಕ್ಕಳು ತಡವಾಗಿ ಮನೆಗೆ ಬಂದಾಗ ಹೆತ್ತವರು ಕೇಳುತ್ತಾರೆ. ಆದರೆ ಹುಡುಗರು ವಿಳಂಬವಾಗಿ ಬಂದಾಗ ಕೇಳುವುದಿಲ್ಲ. ಅವರನ್ನೂ ಕೇಳಬೇಕು. ಮಹಿಳಾ ಸುರಕ್ಷತೆ ಮತ್ತು ಭದ್ರತೆಯನ್ನು ತಮ್ಮ ಸರಕಾರ ಅತ್ಯುನ್ನತ ಆದ್ಯತೆಯ ವಿಷಯವಾಗಿ ಪರಿಗಣಿಸಿದೆ. ಇದಕ್ಕಾಗಿಯೇ ನಾವು ಅತ್ಯಾಚಾರದಂತಹ ಕುಕೃತ್ಯ ತಡೆಯುವ ನಿಟ್ಟಿನಲ್ಲಿ ಕಾನೂನುಗಳನ್ನೇ ಬದಲಾಯಿಸಿ ಮರಣದಂಡನೆಯಂತಹ ಶಿಕ್ಷೆ ನೀಡುವ ಕಾನೂನು ತಂದಿದ್ದೇವೆ ಎಂದು ಮೋದಿ ತಿಳಿಸಿದರು

