ಹೊಸದಿಲ್ಲಿ : ದೇಶದ ಜನರಿಂದ 80-90 ಬಾರಿ ತಿರಸ್ಕೃತಗೊಂಡಿರುವ ವಿಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲಿಕ್ಕಾಗಿ, ಗೂಂಡಾಗಿರಿ ಮುಖೇನ ಸಂಸತ್ತನ್ನು ನಿಯಂತ್ರಿಸಲು ಯತ್ನಿಸಿರುವುದು ತೀರಾ ನಾಚಿಕೆಗೇಡು. ಬೆರಳೆಣಿಕೆಯ ಈ ಮಂದಿಯ ದುರುದ್ದೇಶ ಫಲಿಸಿಲ್ಲ ದೇಶವಾಸಿಗಳು ಇವರ ಕುಕೃತ್ಯಗಳನ್ನು ಗಮನಿಸಿದ್ದು ತಕ್ಕ ಸಮಯದಲ್ಲಿ ಶಿಕ್ಷಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷೀಯರನ್ನು ಕಟುವಾಗಿ ತರಾಟೆಗೆತ್ತಿಕೊಂಡಿದ್ದಾರೆ.
ಚಳಿಗಾಲದ ಅಧಿವೇಶನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ, ಸ್ವಲ್ಪ ಸಮಯ ಹಿಂದೆ ಹರ್ಯಾಣದಲ್ಲಿ ನಡೆದ ಚುನಾವಣೆಯಲ್ಲಿ ಅತ್ಯಂತ ಅಚ್ಚರಿಯೆಂಬಂತೆ ಬಿಜೆಪಿ ಸತತ ತೃತೀಯ ಅವಧಿಗೆ ಕಾಂಗ್ರೆಸ್ ವಿರುದ್ದ ವೀರೋಚಿತ ವಿಜಯ ಸಾಧಿಸಿತ್ತು ಎಂದರು.
ಸಂಸತ್ತಿನಲ್ಲಿ ಆರೋಗ್ಯಪೂರ್ಣ ಚರ್ಚೆ ನಡೆಯಬೇಕು. ಆದರೆ, ದುರದೃಷ್ಟವಶಾತ್ ಕೆಲ ವ್ಯಕ್ತಿಗಳು ತಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ, ಗೊಂದಲ-ಕೋಲಾಹಲ ಸೃಷ್ಟಿಸುವ ಮೂಲಕ ಸಂಸತ್ತನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುವುದು ಸರಿಯಲ್ಲ. ಇವರ ತಂತ್ರಗಳು ಕಟ್ಟಕಡೆಗೂ ಸೋಲುವುದು ಖಚಿತ. ದೇಶವಾಸಿಗಳು ಇವರ ತಂತ್ರಗಳನ್ನು ಗಮನಿಸಿಕೊಂಡು ಸಕಾಲದಲ್ಲಿ ತಕ್ಕ ಉತ್ತರ ನೀಡಿಯೇ ನೀಡುತ್ತಾರೆ ಎಂದು ಪ್ರಧಾನಿ ಮೋದಿ ಮಾರ್ಮಿಕವಾಗಿ ನುಡಿದರು.