ಅಹಮದಾಬಾದ್ : ಅಮೆರಿಕ ಅಧ್ಯಕ್ಷ ಟ್ರಂಪ್ ತೆರಿಗೆ ದಾಳಿಯ ಬೆನ್ನಲ್ಲೇ, ಭಾರತೀಯರು ಸ್ವದೇಶಿ ಬ್ರಹ್ಮಾಸ್ತ್ರ ಎತ್ತಿಕೊಳ್ಳಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಈ ಹಬ್ಬದ ಸಮಯದಲ್ಲಿ ಎಲ್ಲರೂ ಸ್ವದೇಶಿ ವಸ್ತುಗಳನ್ನೇ ಬಳಸುವ ಪ್ರತಿಜ್ಞೆ ಮಾಡಿ ಎಂದು ಹೇಳಿದ್ದಾರೆ.

ಇಲ್ಲಿ ಮಾರುತಿ ಸುಜುಕಿಯ ಮೊದಲ ಎಲೆಕ್ನಿಕ್ ವಾಹನ (ಇವಿ) ಇ-ವಿಟಾರಾ ವನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ‘ನವರಾತ್ರಿ, ವಿಜಯದಶಮಿ, ಧನ್ ತೆರಸ್, ದೀಪಾವಳಿ ಹೀಗೆ ಹಬ್ಬಗಳು ಸಾಲಾಗಿ ಬರುತ್ತಿವೆ. ಆಗ ಹಬ್ಬದ ಆಚರಣೆ ಜತೆಗೆ ಸ್ವಾವಲಂಬನೆ ಆಚರಿಸಿ. ಅಲಂಕಾರಿಕ ವಸ್ತುಗಳಿಂದ ಹಿಡಿದು ಉಡುಗೊರೆಗಳ ವರೆಗೆ ಏನನ್ನೇ ಖರೀದಿಸಿದರೂ ಭಾರತದಲ್ಲಿ ಉತ್ಪಾದಿಸಲಾದವುಗಳನ್ನೇ ಕೊಳ್ಳಿ. ಹೂಡಿಕೆ ಯಾರು ಮಾಡುತ್ತಾರೆ ಎಂಬುದು ಮುಖ್ಯವಲ್ಲ. ಬದಲಿಗೆ ಉತ್ಪಾದನೆಯಲ್ಲಿ ಭಾರತೀಯನ ಶ್ರಮವಿರುವಂತೆ ನೋಡಿಕೊಳ್ಳಿ ಎಂದರು.
‘ವಿದೇಶಿ ವಸ್ತುಗಳನ್ನು ಬಿಟ್ಟು ನಿಮ್ಮ ಅಂಗಡಿಗಳಲ್ಲಿ ಮೇಡ್ ಇನ್ ಇಂಡಿಯಾ ವಸ್ತುಗಳನ್ನೇ ಮಾರಾಟ ಮಾಡಿ. ಜತೆಗೆ ಅಂಗಡಿಗಳ ಮುಂದೆ ಸ್ವದೇಶಿ ಫಲಕಗಳನ್ನು ಅಳವಡಿಸಿ ಎಂದು ಕರೆ ನೀಡಿದರು.

