ಕಟ್ರಾ : ಪಹಲ್ಲಾ೦ ದಾಳಿ ಮೂಲಕ ಪಾಕಿಸ್ತಾನವು ದೇಶದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಲು ಮತ್ತು ಪ್ರವಾಸೋದ್ಯಮವನ್ನು ನಂಬಿಕೊಂಡು ಬದುಕುತ್ತಿರುವ ಕಾಶ್ಮೀರಿಗಳ ಜೀವನೋಪಾಯವನ್ನು ಕಿತ್ತುಕೊಳ್ಳಲು ಉದ್ದೇಶಿಸಿತ್ತು. ಪ್ರವಾಸಿಗರನ್ನು ಗುರಿ ಮಾಡುವ ಮೂಲಕ ಪಾಕಿಸ್ತಾನವು ಮಾನವೀಯತೆ ಮತ್ತು ಕಾಶ್ಮೀರತೆ ಮೇಲೆ ದಾಳಿ ನಡೆಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
‘ಆದರೆ ಭಾರತ ಇದಕ್ಕೆ ತಕ್ಕ ಎದಿರೇಟು ನೀಡಿದೆ. ಆಪರೇಷನ್ ಸಿಂದೂರದ ಹೆಸರು ಕೇಳಿದಾಗಲೆಲ್ಲ ಪಾಕಿಸ್ತಾನಕ್ಕೆ ಹೀನಾಯ ಸೋಲಿನ ನೆನಪಾಗುತ್ತದೆ ಎಂದಿದ್ದಾರೆ.
26 ಮಂದಿಯನ್ನು ಬಲಿಪಡೆದ ಪಹಲ್ಗಾಮ್ ದಾಳಿ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಅವರು ಕಾಶ್ಮೀರ ಕಣಿವೆಯನ್ನು ಸಂಪರ್ಕಿಸುವ ಮೊದಲ ರೈಲು ಸೇವೆ, ವಿಶ್ವದ ಅತಿ ಎತ್ತರದ ಅಂಜಿ ಸೇತುವೆ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಪಹಲ್ಗಾಮ್ ದಾಳಿ ಬಳಿಕ ಕಾಶ್ಮೀರ ನೆಲದಲ್ಲಿ ನಿಂತು ನೆರೆಯ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರವಾಸೋದ್ಯಮದಿಂದಾಗಿ ಉದ್ಯೋಗ ಸೃಷ್ಟಿಗೆ ಮತ್ತು ಜನರ ನಡುವೆ ಸಂಪರ್ಕಕ್ಕೆ ಅವಕಾಶ ಸಿಗುತ್ತದೆ. ದುರದೃಷ್ಟವೆಂದರೆ ನಮ್ಮ ನೆರೆಯ ದೇಶವು ಮಾನವೀಯತೆ, ಸಾಮರಸ್ಯ ಮತ್ತು ಪ್ರವಾಸೋದ್ಯಮದ ವಿರೋಧಿಯಾಗಿದೆ. ಇದರ ಜತೆಗೆ, ಬಡಜನರ ಜೀವನೋಪಾಯದ ಶತ್ರುವಾಗಿದೆ. ಏ.22ರಂದು ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸುವ ಮೂಲಕ ಪಾಕಿಸ್ತಾನವು ಮಾನವೀಯತೆ ಮತ್ತು ಕಾಶ್ಮೀರತೆಯ ಮೇಲೆ ದಾಳಿ ನಡೆಸಿದೆ ಎಂದು ಅಭಿಪ್ರಾಯಪಟ್ಟರು.
ಈ ದಾಳಿ ಮೂಲಕ ದೇಶದಲ್ಲಿ ಕೋಮುಗಲಭೆ ಸೃಷ್ಟಿಸುವುದು, ಕಾಶ್ಮೀರದ ಜನರ ಸಂಪಾದನೆಯನ್ನು ಕಸಿಯುವುದೇ ಪಾಕಿಸ್ತಾನದ ಉದ್ದೇಶ ಆಗಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರದ ಜನ ಪಾಕಿಸ್ತಾನದ ಷಡ್ಯಂತ್ರದ ವಿರುದ್ಧ ಗಟ್ಟಿಯಾಗಿ ನಿಂತರು. ಈ ಬಾರಿ ಕಾಶ್ಮೀರದ ಜನ ಪ್ರದರ್ಶಿಸಿದ ನಿಲುವು ಪಾಕಿಸ್ತಾನಕ್ಕೆ ಮಾತ್ರವಲ್ಲ, ವಿಶ್ವಾದ್ಯಂತ ಭಯೋತ್ಪಾದನೆಗೆ ಸ್ಪಷ್ಟ ಸಂದೇಶವೊಂದನ್ನು ನೀಡಿದೆ ಎಂದರು

