ಹೊಸದಿಲ್ಲಿ : ಜಾಗತಿಕ ರಾಜಕೀಯ ಪರಿಸ್ಥಿತಿಯಲ್ಲಿ ಶಾಶ್ವತ ಸ್ನೇಹಿತರು ಅಥವಾ ಶತ್ರುಗಳಿಲ್ಲ, ಕೇವಲ ಸ್ವ-ಹಿತಾಸಕ್ತಿಗಳಿರುತ್ತವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಭಾರತ ಯಾವುದೇ ದೇಶವನ್ನು ಪ್ರತಿಸ್ಪರ್ಧಿಯಾಗಿ ನೋಡುವುದಿಲ್ಲ, ಎಂದು ಹೇಳಿದ ಅವರು, ತನ್ನ ರೈತರು, ಉದ್ಯಮಿಗಳು ಮತ್ತು ಜನರ ಕಲ್ಯಾಣವನ್ನು ದೃಢವಾಗಿ ರಕ್ಷಿಸುತ್ತದೆ ಎಂದಿದ್ದಾರೆ.
ಎನ್‌ಡಿಟಿವಿ ಡಿಫೆನ್ಸ್ ಸಮಿಟ್ 2025ರಲ್ಲಿ ಮಾತನಾಡಿದ ಸಿಂಗ್, ವಿಶ್ವಾದ್ಯಂತ ರಕ್ಷಣಾ ತ್ಕತೆಯ ಕಡೆಗೆ ತ್ವರಿತ ಬದಲಾವಣೆಯಾಗುತ್ತಿರುವುದನ್ನು ಉಲ್ಲೇಖಿಸಿ, ಸ್ವಾವಲಂಬನೆ ಕೇವಲ ಪ್ರಯೋಜನವಲ್ಲ ಬದಲಾಗಿ ಅಗತ್ಯತೆಯಾಗಿದೆ ಎಂದು ಹೇಳಿದರು. ಭಾರತದ ಬೆಳೆಯುತ್ತಿರುವ ರಕ್ಷಣಾ ರಫ್ತುಗಳನ್ನು ಉದಾಹರಣೆಯಾಗಿ ನೀಡಿದ ಅವರು, 2014ರಲ್ಲಿ 700 ಕೋಟಿ ರೂ. ಗಿಂತ ಕಡಿಮೆಯಿದ್ದ ರಕ್ಷಣಾ ವಲಯದ ರಫ್ತು, ಇಂದು ಸುಮಾರು 24,000 ಕೋಟಿ ರೂ.ಗೆ ಹೆಚ್ಚಿದೆ. ಭಾರತ ಆಮದುದಾರ ದೇಶದಿಂದ ರಫ್ತುದಾರನಾಗಿ ಬೆಳೆದಿದೆ ಎಂದರು.
ಅಲ್ಲದೆ, ಸ್ವದೇಶಿ ನೌಕಾ ಸಾಮರ್ಥ್ಯದ ಪ್ರಗತಿಯನ್ನು ವಿವರಿಸಿದ ಸಚಿವರು, ಎರಡು ನೀಲಗಿರಿ-ಶ್ರೇಣಿಯ ಸ್ಟೈಲ್ ಫ್ರಿಗೇಟ್‌ಗಳನ್ನು ಸೇವೆಗೆ ಸೇರಿಸಿದ್ದನ್ನು ಉಲ್ಲೇಖಿಸಿದರು. ಇದೇ ವೇಳೆ ಅವರು, ಭಾರತ ಮುಂದಿನ ಎಲ್ಲಾ ಯುದ್ಧನೌಕೆಗಳನ್ನು ಸ್ಥಳೀಯವಾಗಿ ತಯಾರಿಸಲಿದೆ ಎಂದು ಘೋಷಿಸಿದರು. ಅಲ್ಲದೆ, ಭವಿಷ್ಯದ ಸುದರ್ಶನ ಚಕ್ರ ವಾಯು ರಕ್ಷಣಾ ವ್ಯವಸ್ಥೆ ಯೋಜನೆಗಳನ್ನು ಹೆಸರಿಸಿದರು.

