ನವದೆಹಲಿ :: ಲೋಕಸಭೆಯಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ವಿರುದ್ಧ ತೀಕ್ಷ್ಯ ವಾಗ್ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಬುಧವಾರ ರಾಜ್ಯ ಸಭೆಯಲ್ಲೂ ತಮ್ಮ ರಣಾರ್ಭಟವನ್ನು ಮುಂದುವರೆಸಿದ್ದಾರೆ. ‘ಭಾರತದ ಸಂವಿಧಾನಕ್ಕೆ ಅತಿದೊಡ್ಡ ಶತ್ರುವೆಂದರೆ ಕಾಂಗ್ರೆಸ್, ಏಕೆಂದರೆ ತುರ್ತುಸ್ಥಿತಿ ಹೇರಿದವರು ಇಂದು ಸಂವಿಧಾನ ರಕ್ಷಣೆಯ ನಾಟಕ ಆಡುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಮೋದಿ, ‘ಕಾಂಗ್ರೆಸ್ ಪಕ್ಷ ನಮ್ಮ ದೇಶದ ಸಂವಿಧಾನದ ಅತಿದೊಡ್ಡ ಶತ್ರು. ಜನರನ್ನು ದಾರಿ ತಪ್ಪಿಸಲು ಅವರು ಸುಳ್ಳು ಕತೆಗಳನ್ನು ಹೆಣೆಯುತ್ತಿದ್ದಾರೆ. 2024ರ ಚುನಾವಣೆ ಸಂವಿಧಾನ ವನ್ನು ರಕ್ಷಿಸುವುದಕ್ಕೋಸ್ಕರ ನಡೆಯುತ್ತಿದೆ ಎಂದು ಕಾಂಗ್ರೆಸ್ ಹೇಳಿತ್ತು. ಸಂವಿಧಾನವನ್ನು ಚೆನ್ನಾಗಿ ರಕ್ಷಿಸುವವರು ನಾವೇ ಎಂಬ ಕಾರಣಕ್ಕೆ ಜನರು ಎನ್ಡಿಎಯನ್ನು ಗೆಲ್ಲಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. ಮೋದಿ ತೀಕ್ಷ್ಯ ವಾಗ್ದಾಳಿ ನಡೆಸುತ್ತಿದ್ದಾಗಲೇ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಅದನ್ನೂ ತೀವ್ರ ವಾಗಿ ತರಾಟೆ ತೆಗೆದುಕೊಂಡ ಪ್ರಧಾನಿ, ‘ಮೊದಲು ಘೋಷಣೆ ಕೂಗಿ ಈಗ ಓಡಿ ಹೋಗುತ್ತಿದ್ದಾರೆ’ ಎಂದು ಕಿಡಿಕಾರಿದರು. ಸಭಾಪತಿ ಜಗದೀಪ್ ಧನಕರ್ ಕೂಡ ವಿಪಕ್ಷಗಳ ನಡೆ ಸಂವಿಧಾನಕ್ಕೆ ವಿರುದ್ಧವಾದುದು ಎಂದು ಆಕ್ಷೇಪಿಸಿದರು.