ಹೊಸದಿಲ್ಲಿ : ಮುಂಬೈ ಸರಣಿ ಭಯೋತ್ಪಾದಕ ದಾಳಿ ಸಂಚುಕೋರ ತಹವೂರ್ ರಾಣಾನನ್ನು ಶೀಘ್ರವಾಗಿ ಹಸ್ತಾಂತರಿಸಲು ಅಮೆರಿಕದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಈ ದಿಸೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದು ಶುಕ್ರವಾರ ಕೇಂದ್ರ ಹೇಳಿದೆ.
ಜನವರಿ 21 ರಂದು ಅಮೆರಿಕ ಸುಪ್ರೀಂ ಕೋರ್ಟ್ ರಾಣಾನ ಮರುಪರಿಶೀಲನಾ ಅರ್ಜಿ ತಿರಸ್ಕರಿಸಿತು. ಇದರೊಂದಿಗೆ ಭಾರತಕ್ಕೆ ಬೇಕಿರುವ ಮೋಸ್ಟ್ ವಾಂಟೆಡ್ ಉಗ್ರನ ಹಸ್ತಾಂತರಕ್ಕಿದ್ದ ಅಡೆತಡೆಗಳು ನಿವಾರಣೆಗೊಂಡಿತು. ಮುಂಬೈ ಭಯೋತ್ಪಾದಕ ದಾಳಿಯ ಆರೋಪಿಗಳನ್ನು ಶೀಘ್ರವಾಗಿ ಭಾರತಕ್ಕೆ ಹಸ್ತಾಂತರಿಸುವ ಕಾರ್ಯವಿಧಾನದ ವಿಷಯಗಳ ಬಗ್ಗೆ ನಾವು ಈಗ ಅಮೆರಿಕದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಮೋದಿ ಅಮೆರಿಕ ಭೇಟಿ :
ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಗೆ ಸಂಬಂಧಿಸಿದಂತೆಯೂ ಭಾರತ ಮತ್ತು ಅಮೆರಿಕ ಕಾರ್ಯಶೀಲವಾಗಿದೆ ಎಂದು ಎಂಇಎ ತಿಳಿಸಿದೆ. ಭಾರತ- ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸಲು ಪ್ರಧಾನಿ ಮೋದಿಯವರು ಎದುರು ನೋಡುತ್ತಿದ್ದಾರೆ. ಭೇಟಿಯ ನಿರ್ದಿಷ್ಟ ದಿನಾಂಕಗಳನ್ನು ಸದ್ಯದಲ್ಲೇ ಘೋಷಿಸಲಾಗುವುದು ಎಂದು ಅವರು ಹೇಳಿದರು.