ಖಜುರಾಹೋ (ಮ.ಪ್ರ.) : ರಾಷ್ಟ್ರದ ಜಲ ಸಂಪನ್ಮೂಲಗಳ ಅಭಿವೃದ್ಧಿಗೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ನೀಡಿರುವ ಅನನ್ಯ ಕೊಡುಗೆಗಳನ್ನು ಕಾಂಗ್ರೆಸ್ ಸಂಪೂರ್ಣ ನಿರ್ಲಕ್ಷಿಸಿರುವುದು ತೀರಾ ಅಕ್ಷಮ್ಯವೆಂದು ಪ್ರಧಾನಿ ನರೇಂದ್ರ ಮೋದಿ ವಿಷಾದಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಕೆನ್-ಬೆಟ್ಟಾ ನದಿ ಜೋಡಣೆ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಖಜುರಾಹೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಧಾರಾಳ ಜಲ ಸಂಪನ್ಮೂಲವುಳ್ಳ ಮತ್ತು ಇವನ್ನು ಅತ್ಯುತ್ತಮವಾಗಿ ನಿರ್ವಹಿಸಬಲ್ಲ ರಾಷ್ಟ್ರಗಳು ಮಾತ್ರ 21ನೇ ಶತಮಾನದಲ್ಲಿ ಮುನ್ನಡೆ ಸಾಧಿಸಬಲ್ಲುವು ಎಂದರು. ರಾಷ್ಟ್ರದ ಜಲ ಸಂಪನ್ಮೂಲಗಳ ಬಲಪಡಿಸುವಿಕೆ, ಅವುಗಳ ನಿರ್ವಹಣೆ, ಅಣೆಕಟ್ಟು ನಿರ್ಮಾಣಗಳಿಗೆ ಡಾ.ಅಂಬೇಡ್ಕರ್ ಅವರ ದೂರದೃಷ್ಟಿ ಮತ್ತು ದೂರದರ್ಶಿತ್ವಗಳು ನಿರ್ಣಾಯಕ ಕೊಡುಗೆ ನೀಡಿವೆ ಎಂದರು.