ಹೊಸದಿಲ್ಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ದ ಶತಮಾನೋತ್ಸವದ ಪ್ರಯುಕ್ತ ಸಂಘದ 100 ವರ್ಷಗಳ ಪಯಣ ಹೊಸ ದಿಗಂತಗಳು ಎಂಬ ಶೀರ್ಷಿಕೆಯಲ್ಲಿ ಆ.26ರಿಂದ 28ರವರೆಗೆ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ಉಪನ್ಯಾಸ ಸರಣಿ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ದಿಲ್ಲಿಯ ವಿಜ್ಞಾನ ಭವನದಲ್ಲಿ ಪ್ರತಿದಿನ ಸಂಜೆ 5.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಸಂಘ ಶತಾಬ್ಬಿ ವರ್ಷದ ಸಂದರ್ಭದಲ್ಲಿ ನೂರು ವರ್ಷಗಳ ಸಂಘಕಾರ್ಯ, ಸಂಘದ ಉದ್ದೇಶ, ಅದರ ಸಿದ್ಧಾಂತ, ಅನುಭವ ಇತ್ಯಾದಿ ಎಲ್ಲಾ ವಿಚಾರಗಳನ್ನು ಭಾಗವತ್ ಮಂಡಿಸುತ್ತಾರೆ.
ಅಲ್ಲದೇ ಭವಿಷ್ಯದ ಯೋಜನೆಗಳ ಬಗ್ಗೆಯೂ ವಿವರಿಸುತ್ತಾರೆ. ಕಾರ್ಯಕ್ರಮದ ಕೊನೆಯ ದಿನ ಸಭಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. 2018ರಲ್ಲಿ ಹೊಸದಿಲ್ಲಿಯಲ್ಲಿ ಇದೇ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿ ದಿಲ್ಲಿ ಸೇರಿದಂತೆ ಪ್ರಮುಖ ನಾಲ್ಕು ನಗರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ, ನಂತರ ಕೋಲ್ಕತಾ ಮತ್ತು ಮುಂದಿನ ವರ್ಷ ಫೆಬ್ರವರಿಯಲ್ಲಿ ಮುಂಬೈಯಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಿದೆ.
ಈ ವರ್ಷ ವಿಜಯದಶಮಿ ದಿನವಾದ ಅ.2ರಿಂದ ಆರಂಭಿಸಿ 2026ರ ವಿಜಯ ದಶಮಿಯವರೆಗೆ ಸಂಘ ಶತಾಬ್ದ ವರ್ಷವೆಂದು ಘೋಷಿಸಲಾಗಿದೆ. ವಿಜಯ ದಶಮಿಯಂದು ನಾಗ್ಪುರದ ರೇಶಿಮಭಾಗ್ ಸ್ಮೃತಿ ಮಂದಿರ ಮೈದಾನವೂ ಸೇರಿದಂತೆ ದೇಶದ ಎಲ್ಲಾ ಶಾಖೆಗಳಲ್ಲಿ ವಿಜಯದಶಮಿ ಉತ್ಸವ ಆಚರಿಸಲಾಗುತ್ತದೆ. ಅಲ್ಲದೇ ಮುಂದಿನ ಒಂದು ವರ್ಷ ಕಾಲ ಸಂಘವನ್ನು ಸರ್ವ ಸ್ಪರ್ಶಿ ಮತ್ತು ಸರ್ವವ್ಯಾಪ್ತಿಯಾಗಿಸುವ ವಿವಿಧ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.

