ಹೊಸದಿಲ್ಲಿ : ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪುಣ್ಯಸ್ಮರಣೆ ಅಂಗವಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ಇನ್ನಿತರ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ. ಸರ್ದಾರ ವಲ್ಲಭಬಾಯ್ ಪಟೇಲ್ ವ್ಯಕ್ತಿತ್ವ ಮತ್ತು ಕೆಲಸ, ದೇಶದ ಏಕತೆ ಹಾಗೂ ಸಮಗ್ರತೆ ಎತ್ತಿಹಿಡಿಯುವಲ್ಲಿ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣದ ಗುರಿ ಸಾಧಿಸುವಲ್ಲಿ ಪ್ರೇರಣೆಯಾಗಿದೆ. ದೇಶದ ಜನತೆಗೆ ಸದಾ ಸ್ಫೂರ್ತಿದಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ, ದೇಶದ ಏಕತೆಯ ಸಂಕೇತವಾಗಿರುವ ಸರ್ದಾರ್ ಪಟೇಲ್ ಅವರು, 550 ಪ್ರಾಂತ್ಯಗಳನ್ನು ಒಗ್ಗೂಡಿಸುವ ಮೂಲಕ ಆಧುನಿಕ ಭಾರತದ ನಿರ್ಮಾಣಕ್ಕೆ ಸುಭದ್ರ ಅಡಿಪಾಯ ಹಾಕಿದ್ದರು ಎಂದು ಸ್ಮರಿಸಿದ್ದಾರೆ.