ಶಬರಿಮಲೆ : ಇಲ್ಲಿನ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಸೋಮವಾರ ಮಂಡಲ ಸೇವೆ ಮತ್ತು ಮಕರವಿಳಕ್ಕು ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಮೂಲಕ ಈ ಸಲದ ಅಯ್ಯಪ್ಪ ಯಾತ್ರೆ ಮುಕ್ತಾಯಗೊಂಡು, ಬೆಳಗ್ಗೆ 6.00 ಗಂಟೆಗೆ ದೇಗುಲಕ್ಕೆ ಬೀಗ ಹಾಕಿ ಪಂದಳಂ ರಾಜ ಮನೆತನಕ್ಕೆ ಕೀಲಿ ಹಸ್ತಾಂತರಿಸಲಾಯಿತು. ‘ಈ ಬಾರಿ ಸುಮಾರು 53 ಲಕ್ಷ ಜನರು ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ’ ಎಂದು ಟ್ರಾವಂಕೂರ್ ದೇವಸ್ವಂ ಮಂಡಳಿ ತಿಳಿಸಿದೆ. ಸೋಮವಾರ ಬೆಳಗ್ಗೆ 5.00 ಗಂಟೆಯಿಂದ ಗಣಹೋಮ, ಅಯ್ಯಪ್ಪನಿಗೆ ವಿಭೂತಿ ಅಭಿಷೇಕ ಸೇವೆ ಬಳಿಕ ಹರಿವರಾಸಹಂ ಗೀತೆ ಹಾಡಿ ದೇಗುಲಕ್ಕೆ ಬಾಗಿಲು ಹಾಕಲಾಯಿತು.