ನವದೆಹಲಿ : 2025ರ ಹೊಸ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ರೈತಾಪಿ ಸಮುದಾಯಕ್ಕೆ ಮೂರು ಬಂಪರ್ ಕೊಡುಗೆ ಪ್ರಕಟಿಸಿದೆ. ಎರಡು ಕೃಷಿ ವಿಮಾ ಯೋಜನೆಗಳ ಅವಧಿಯನ್ನು ಮತ್ತೆ ಒಂದು ವರ್ಷ ವಿಸ್ತರಣೆ ಮಾಡಿದ್ದರೆ, ಸಬ್ಸಿಡಿ ದರದಲ್ಲಿ ಡಿಎಪಿ ಗೊಬ್ಬರ ವಿತರಿಸುವ ಯೋಜನೆಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ‘ಸರ್ಕಾರದ ಹೊಸ ವರ್ಷದ ಮೊದಲ ನಿರ್ಣಯವು ದೇಶದ ಕೋಟಿ ಕೋಟಿ ರೈತ ಸಹೋದರ ಸಹೋದರಿಯರಿಗೆ ಸಮರ್ಪಣೆ’ ಎಂದಿದ್ದಾರೆ.