ವಾಷಿಂಗ್ಟನ್ : ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶದಲ್ಲಿ ನಡಿಗೆ ಮಾಡುವ ಮೂಲಕ ಈ ಹಿಂದಿನ ಬಾಹ್ಯಾಕಾಶ ನಡಿಗೆ ದಾಖಲೆಗಳನ್ನು ಮುರಿದಿದ್ದಾರೆ.
2024 ಜೂನ್‌ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್‌ಎಸ್) ವಿಲಿಯಮ್ಸ್ ಮತ್ತು ಸಹೋದ್ಯೋಗಿ ಬುಚ್ ವಿಲ್ಲೋರ್ ಗುರುವಾರ ಬಾಹ್ಯಾಕಾಶ ನಡಿಗೆ ನಡೆಸಿದ್ದಾರೆ. ಕ್ಷೀಣಿಸಿದ ರೇಡಿಯೋ ಸಂವಹನ ಯಂತ್ರಾಂಶವನ್ನು ತೆಗೆದುಹಾಕಲು, ಕಕ್ಷೆಯಲ್ಲಿರುವ ಪ್ರಯೋಗಾಲಯದ ಹೊರಭಾಗದಲ್ಲಿ ಸೂಕ್ಷ್ಮ ಜೀವಿಗಳು ಅಸ್ತಿತ್ವದಲ್ಲಿವೆಯೇ ಎಂದು ತೋರಿಸುವ ಮಾದರಿಗಳನ್ನು ಸಂಗ್ರಹಿಸಲು ಇವರಿಬ್ಬರು ಐಎಸ್ ಎಸ್‌ನ ಹೊರಗೆ ಸಾಹಸ ಮಾಡಿದ್ದರು.
ಈಸ್ಟರ್ನ್ ಟೈಮ್ (ಇಟಿ) ಪ್ರಕಾರ ಶುಕ್ರವಾರ ಬೆಳಗ್ಗೆ 7:43ಕ್ಕೆ (ಇಟಿ) ಪ್ರಾರಂಭವಾದ ಬಾಹ್ಯಾಕಾಶ ನಡಿಗೆ ಮಧ್ಯಾಹ್ನ 1:09ಕ್ಕೆ ಕೊನೆಗೊಂಡಿತ್ತು. ಇದು 5 ಗಂಟೆ 26 ನಿಮಿಷಗಳದ್ದಾಗಿದ್ದು ವಿಲಿಯಮ್ಸ್ ಗೆ ಒಂಬತ್ತನೇ ಮತ್ತು ವಿಲ್ಲೋರ್ ಗೆ ಐದನೇ ಬಾಹ್ಯಾಕಾಶ ನಡಿಗೆಯಾಗಿತ್ತು.
ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್, ಮಾಜಿ ಗಗನಯಾತ್ರಿ ಪೆಗ್ಗಿ ವಿಟ್ಲನ್ ಅವರ 60 ಗಂಟೆ 21 ನಿಮಿಷಗಳ ಒಟ್ಟು ಬಾಹ್ಯಾಕಾಶ ನಡಿಗೆಯ ಸಮಯವನ್ನು ಮೀರಿಸಿದ್ದಾರೆ ಎಂದು ನಾಸಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ