ಹೊಸದಿಲ್ಲಿ: ಅಮೆರಿಕ ಮತ್ತು ಭಾರತ ನಡುವಿನ ಸುಂಕದ ಸಮರ ಮತ್ತೊಂದು ಮಜಲು ಮುಟ್ಟಿದ್ದು, ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕ ಹೇರಲಾಗಿದೆ. ಈ ಮೂಲಕ ಭಾರತದ ಮೇಲೆ ಒಟ್ಟಾರೆಯಾಗಿ ಶೇ.50 ಸುಂಕ ಹಾಕಿದಂತಾಗಿದೆ.
ರಷ್ಯಾದಿಂದ ತೈಲ ಖರೀದಿಯ ನೆಪ ಹೇಳಿರುವ ಅಮೆರಿಕ, ಹೆಚ್ಚುವರಿ ಸುಂಕ ಹಾಕುತ್ತಿರುವುದಾಗಿ ಹೇಳಿದೆ. ಅಮೆರಿಕದ ಈ ಕ್ರಮವನ್ನು ಕಟು ಮಾತುಗಳಲ್ಲಿ ಖಂಡಿಸಿರುವ ವಿದೇಶಾಂಗ ಇಲಾಖೆ, ಇದೊಂದು ಅನ್ಯಾಯ, ಅಸಮರ್ಥನೀಯ ಮತ್ತು ಅಸಮಂಜಸ ಕ್ರಮವಾಗಿದೆ ಎಂದು ಟೀಕಿಸಿದೆ.
ದೇಶದ ಹಿತಾಸಕ್ತಿಗಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಕಾರಣಕ್ಕಾಗಿ ಭಾರತವನ್ನು ಅಮೆರಿಕ ಗುರಿ ಮಾಡಿಕೊಂಡಿದೆ ಎಂದೂ ಖಂಡಿಸಿದೆ. ಈ ಮಧ್ಯೆ ಮಾತು ಮಾತಿಗೂ ಸುಂಕ ವಿಧಿಸುತ್ತೇನೆಂದು ಬೆದರಿಸುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಸುಂಕಕ್ಕೆ ಸೆಡ್ಡು ಹೊಡೆಯಲು ತೃತೀಯ ಜಗತ್ತು ಮುಂದಾಗುತ್ತಿದೆ. ಅಮೆರಿಕ ಹೇರಿದ ಸುಂಕದ ವಿಚಾರದಲ್ಲಿ ಟ್ರಂಪ್ ರೊಂದಿಗೆ ಚರ್ಚೆ ಮಾಡಲ್ಲ. ಏನೇ ಚರ್ಚೆ ಮಾಡುವುದಿದ್ದರೂ, ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರಿಗೆ ಕರೆ ಮಾಡುವೆ ಎಂದು ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಲೂಲ ಹೇಳಿದ್ದಾರೆ.

