ನವದೆಹಲಿ : ಭಾರತವು ಬಲೂಚಿಸ್ತಾನದಲ್ಲಿ ಉಗ್ರವಾದ ಪ್ರಾಯೋಜಿಸುತ್ತಿದೆ’ ಎಂಬ ಪಾಕಿಸ್ತಾನದ ಆರೋಪಗಳನ್ನು ಭಾರತ ಶುಕ್ರವಾರ ತಿರಸ್ಕರಿಸಿದೆ, ಜಾಗತಿಕ ಭಯೋತ್ಪಾದನೆಯ ನಿಜವಾದ ಕೇಂದ್ರಬಿಂದು ಎಲ್ಲಿದೆ ಎಂಬುದು ಜಗತ್ತಿಗೆ ಚೆನ್ನಾಗಿ ತಿಳಿದಿದೆ ಎಂದು ಪಾಕ್‌ಗೆ ತಿರುಗೇಟು ನೀಡಿದೆ.
ಗುರುವಾರದ ಬಲೂಚಿಸ್ತಾನ ರೈಲು ದಾಳಿಯಲ್ಲಿ ಭಾರತವನ್ನು ನೇರವಾಗಿ ಭಾಗಿಯಾಗಿಸದೆ ಉಗ್ರವಾದ ಪ್ರಾಯೋಜಿಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿತ್ತು. ಇದಕ್ಕೆ ತಿರುಗೇಟು ನೀಡಿದ ಭಾರತದ ವಿದೇಶಾಂಗೆ ವಕ್ತಾರ ರಣಧೀರ್ ಜೈಸ್ವಾಲ್, ‘ಪಾಕಿಸ್ತಾನವು ತನ್ನ ಆಂತರಿಕ ಸಮಸ್ಯೆಗಳು ಮತ್ತು ವೈಫಲ್ಯಗಳಿಗೆ ಬೆರಳು ತೋರಿಸಿ ಇತರರ ಮೇಲೆ ಹೊಣೆ ಹೊರಿಸುವ ಬದಲು ಒಳಮುಖವಾಗಿ ನೋಡಬೇಕು. ಪಾಕಿಸ್ತಾನ ಮಾಡಿರುವ ಆಧಾರರಹಿತ ಆರೋಪಗಳನ್ನು ನಾವು ಬಲವಾಗಿ ತಿರಸ್ಕ ರಿಸುತ್ತೇವೆ. ಜಾಗತಿಕ ಉಗ್ರವಾದ ಕೇಂದ್ರಬಿಂದು ಎಲ್ಲಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ’ ಎಂದರು. ಇದಕ್ಕೂ ಮುನ್ನ ಮಾತನಾಡಿದ್ದ ಪಾಕ್ ವಿದೇಶಾಂಗ ವಕ್ತಾರ ಶೌಕತ್ ಅಲಿ ಖಾನ್, ‘ಈಗಿನ ಬಲೂಚ್ ರೈಲು ದಾಳಿ ಹಿಂದೆ ಅಫ್ಘಾನಿಸ್ತಾನ ಇದೆ. ಆದರೆ ಹಾಗಂತ ಬಲೂಚಿ ಉಗ್ರರಿಗೆ ಭಾರತ ಕುಮ್ಮಕ್ಕು ನೀಡುತ್ತಿತ್ತು ಎಂಬ ನಮ್ಮ ಹಿಂದಿನ ನಿಲುವಿನಲ್ಲಿ ಬದಲಾವಣೆ ಇಲ್ಲ. ಸತ್ಯಗಳು ಬದಲಾಗಿಲ್ಲ. ಭಾರತವು ತನ್ನ ನೆರೆಯ ದೇಶ ಅಸ್ಥಿರಗೊಳಿಸುತ್ತಿದೆ’ ಎಂದಿದ್ದರು.

