ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿನ ಸಮರ ಬೇರೊಂದು ಮಗ್ಗಲಿಗೆ ಹೊರಳಿದ್ದು ಯೆಮನ್ನಲ್ಲಿನ ಹೌತಿ ಉಗ್ರರ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಅಮೆರಿಕ ಬೆಂಬಲಿತ ಪಡೆಗಳ ಮೇಲೆ ರಷ್ಯಾ ದಾಳಿ ನಡೆಸಿದರೆ ಪುಟಿನ್ ಬೆಂಬಲಿಗರ ಮೇಲೆ ಇಸ್ರೇಲ್ ಕೂಡ ದಾಳಿ ನಡೆಸಿದೆ.
ಗುರುವಾರ ಬೆಳಗ್ಗೆಯೇ ಅಮೆರಿಕದ ವೈಮಾನಿಕ ಪಡೆಗಳು, ಯೆಮನ್ನಲ್ಲಿ ಬೀಡು ಬಿಟ್ಟಿರುವ ಇರಾನ್ ಬೆಂಬಲಿತ ಹೌತಿ ಉಗ್ರರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿವೆ. ಹೌತಿ ಉಗ್ರರು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವ ಸ್ಥಳಗಳನ್ನೇ ಗುರಿಯಾಗಿಸಿ ದಾಳಿ ಮಾಡಲಾಗಿದೆ. ಐದು ಸಂಗ್ರಹಾಗಾರಗಳನ್ನು ನಾಶ ಮಾಡಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಸರ್ಕಾರವೇ ಹೇಳಿದೆ.
ದಾಳಿಯಲ್ಲಿ ಅಮೆರಿಕದ ನೌಕಾಪಡೆ ಮತ್ತು ವೈಮಾನಿಕ ಪಡೆಗಳು ಜಂಟಿಯಾಗಿ ಪಾಲ್ಗೊಂಡಿವೆ. ದಾಳಿಗಾಗಿ ಬಿ-2 ಸ್ಪಿರಿಟ್ ಲಾಂಗ್ರೇಂಜ್ ಸ್ಟೈಲ್ ಬಾಂಬರ್ ವಿಮಾನ ಬಳಸಿ ಕೊಳ್ಳಲಾಗಿದೆ. ಇವು ಅತ್ಯಾಧುನಿಕ ಸಮರ ವಿಮಾನಗಳಾಗಿದ್ದು, ಯಾವುದೇ ಸಮಯದಲ್ಲಿ, ಯಾವುದೇ ಸ್ಥಳವನ್ನು ಗುರಿಯಾಗಿಸಿ ದಾಳಿ ನಡೆಸಬಹುದಾಗಿದೆ. ಈ ಮಧ್ಯೆ, ಅಮೆರಿಕದ ದಾಳಿಯನ್ನು ಒಪ್ಪಿಕೊಂಡಿರುವ ಹೌತಿ ಉಗ್ರರು, ಇದಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ.