Home » ಮಕರಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲದ ಮಹತ್ವ
 

ಮಕರಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲದ ಮಹತ್ವ

by Kundapur Xpress
Spread the love
ಸಂಕ್ರಾಂತಿ ಎಂದರೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದು.
ಆಯನ ಸಂಕ್ರಮಣಗಳು ಎರಡು. ಉತ್ತರಾಯಣ ರವಿ(ಸೂರ್ಯನು)ಯು. ಭೂ ಮಧ್ಯೆಯ ರೇಖೆಗೆ ಉತ್ತರಾಭಿಮುಖವಾಗಿ ಚಲಿಸುವ ಕಾಲವಾದರೆ, ದಕ್ಷಿಣಾಯಣರವಿಯು ಭೂ ಮಧ್ಯೆ ರೇಖೆಗೆ ದಕ್ಷಿಣಾಭಿಮುಖವಾಗಿ ಚಲಿಸುವ ಕಾಲವಾಗಿದೆ.
ಉತ್ತರಾಯಣ ಮಪ್ಯುಕ್ತಂ ಮಕರಸ್ತೇದಿವಾಕರೇ | ಕರ್ಕಾಟಾದಿಸ್ತೀತೇ ಭಾನೌ ದಕ್ಷೀಣಾಯಣ ಮುಚ್ಯತೇ ||
ಉತ್ತರಾಯಣದಲ್ಲಿ ಸೂರ್ಯನು ಬಲಿಷ್ಠ ನಾಗಿರುವನು ದಕ್ಷಿಣಾಯಣದಲ್ಲಿ ಬಲಹೀನನಾಗಿರುವನು.
ಮಕರರಾಶಿಗೆ ಸೂರ್ಯನು ಪ್ರವೇಶಿ ಸಿದ ಕಾಲದ ನಂತರ ಮುವತ್ತು ಘಳಿಗೆಗಳು ಪುಣ್ಯಕಾಲವಾಗಿದೆ.
ಸಂಕ್ರಾಂತಿ ಹಬ್ಬದ ವಿಷಯಕ್ಕೆ ಬಂದರೇ ಸುಗ್ಗಿ ಕಾಲ. ರೈತರು ತಾವುಬೆಳೆದ ಪೈರಿನ ರಾಶಿಗಳನ್ನು ಹಾಕಿ ಪೂಜಿಸಿ ಸಂಭ್ರಮಿಸುವ ದಿನ ಭತ್ತ ವಿಶೇಷವಾಗಿ ಕಬ್ಬು, ಹಬ್ಬದ ಸುಗ್ಗಿಯ ಸಂಕೇತವಾಗಿದೆ. ಹಬ್ಬದ ದಿನ ಎಳ್ಳು ದಾನಮಾಡಬೇಕೆಂದಿದೆ. ಎಳ್ಳು ಶನಿಮಹಾರಾಜನನ್ನು ಪ್ರತನಿಧಿಸುವ ಧಾನ್ಯ. ಬರೀ ಎಳ್ಳನ್ನು ಮಾತ್ರ ದಾನಮಾಡದೇ ಇದೀಗ ತಾನೇ ಹೊಸಬೆಳೆ ಬೆಳದ ಬೆಲ್ಲ, ಕೊಬ್ಬರಿ, ಹುರಿಗಡಲೆ ಎಳ್ಳು ಎಲ್ಲದರ ಮಿಶ್ರಣಮಾಡಿ ಸಂಕ್ರಾಂತಿಯಂದು ಕೊಡುತ್ತಾರೆ. ಕಬ್ಬು, ಬಾಳೆಹಣ್ಣಿನ ಸಮೇತ ಮನೆಯಲ್ಲಿ ದೇವರ ಪೂಜೆಮಾಡಿ, ನೈವೇದ್ಯಕ್ಕೆ ಹೊಸ ಅಕ್ಕಿ ಹೆಸರುಬೇಳೆ, ಬೆಲ್ಲತುಪ್ಪ ಕೊಬ್ಬರಿ ಸೇರಿಸಿ ಪೊಂಗಲ್ ಮಾಡಿ, ನೆಲಗಡಲೆ ಅವರೆ ಕೊಬ್ಬರಿ ಮೆಣಸು ಜೀರಿಗೆ ಸೇರಿಸಿ ಖಾರದ ಹುಗ್ಗಿ ಮಾಡಿ, ದೇವರಿಗೆ ನೈವೇದ್ಯ ಮಾಡಿ ಆ ಸೂರ್ಯನಾರಾಯಣನಿಗೆ ಅರ್ಪಣೆ ಮಾಡಿ ನಮಸ್ಕರಿಸ ಬೇಕು. ಸಂಜೆ ಎಲ್ಲರಿಗೂ ಬೀರಬೇಕು ಎನ್ನುವ ಸಂಪ್ರದಾಯ. ಎಳ್ಳು, ಕಬ್ಬು ,ಸಕ್ಕರೆ ಅಚ್ಚುಗಳನ್ನು ದೇವರಿಗೆ ಸಮರ್ಪಣೆ ಮಾಡಿ ಹಿರಿಯರಿಗೆ ಕೊಟ್ಟು ಆಶೀರ್ವಾದ ಪಡೆಯುವುದು ರೂಢಿ.
ಉತ್ತರಾಯಣ ಪರ್ವಕಾಲದಲ್ಲಿ ಕರಿಎಳ್ಳು ಅರೆದು ಅದನ್ನು ಹಚ್ಚಿಕೊಂಡು ಎಲ್ಲರೂ ಸ್ನಾನಮಾಡಲೇಬೇಕು.ಹೆoಗಸರು, ಮಕ್ಕಳು ಕೂಡ. ಆದರಿoದ ಮನುಷ್ಯ ನಿರೋಗಿಯಾಗುವನೆಂದು
ಧರ್ಮಶಾಸ್ತ್ರ ಹೇಳುತ್ತದೆ.
ರವಿ ಸಂಕ್ರಮಣೆ ಪ್ರಾಪ್ತೇನ ಸ್ನಾಯದ್ಯಸ್ತು ಮಾನವಃ |
ಸಪ್ತಜನ್ಮಸು ರೋಗಿ ಸ್ಯಾತ್ ನಿರ್ಧನಶ್ಚೈವ ಜಾಯತೇ ||
ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನ ವಧೆ ಮಾಡಿದ್ದಾಳೆ ಎಂಬ ಕಥೆಯಿದೆ. ಸಂಕ್ರಾಂತಿಯ ಬಗ್ಗೆ ಪಂಚಾಂಗದಲ್ಲಿ ಸಂಕ್ರಾಂತಿಯ ರೂಪ, ವಯಸ್ಸು, ವಸ್ತ್ರ, ಹೋಗುವ ದಿಕ್ಕು ಮುಂತಾದವುಗಳ ಮಾಹಿತಿ ಇರುತ್ತದೆ. ಅದು ಕಾಲಮಹಿಮೆಗನುಸಾರ ಅವಳಲ್ಲಿ ಆಗುವ ಬದಲಾವಣೆಯನ್ನು ಅನುಸರಿಸಿರುತ್ತದೆ. ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ. ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು “ದಕ್ಷಿಣಾಯನ” ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣವು ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಸಮಯ ಚೈತನ್ಯದ ಲಾಭವಾಗುತ್ತದೆ.
ಹಬ್ಬದ ಆಚರಣೆ :–
ಮಕರಸಂಕ್ರಾಂತಿಯ ಕಾಲದಲ್ಲಿ ತೀರ್ಥಸ್ನಾನವನ್ನು ಮಾಡುವುದರಿಂದ ಮಹಾಪುಣ್ಯವು ದೊರೆಯುವುದು
ಮಕರಸಂಕ್ರಾಂತಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಈ ಕಾಲದಲ್ಲಿ ತೀರ್ಥಸ್ನಾನಕ್ಕೆ ವಿಶೇಷ ಮಹತ್ವವಿದೆ. ಗಂಗಾ, ಯಮುನಾ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ ನದಿಗಳ ದಡದಲ್ಲಿರುವ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಮಹಾಪುಣ್ಯವು ಲಭಿಸುತ್ತದೆ.
ಪರ್ವಕಾಲದಲ್ಲಿ ದಾನ :– ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲ ವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ.
ದಾನದ ವಸ್ತುಗಳು :– ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾಶಕ್ತಿ ದಾನ ಮಾಡಬೇಕು. ಈ ದಿನ ಮುತ್ತೈದೆಯರು ದಾನ ಮಾಡುತ್ತಾರೆ. ಮುತ್ತೈದೆಯರು ಕೆಲವು ಪದಾರ್ಥಗಳನ್ನು ಕುಮಾರಿಯರಿಂದ ದೋಚುತ್ತಾರೆ (ಅಪಹರಿಸುತ್ತಾರೆ) ಮತ್ತು ಅವರಿಗೆ ಎಳ್ಳುಬೆಲ್ಲ ಕೊಡುತ್ತಾರೆ.
ಬಾಗಿನ ಕೊಡುವ ಮಹತ್ವ :– ಬಾಗಿನ ಕೊಡುವುದೆಂದರೆ ಇನ್ನೊಂದು ಜೀವದಲ್ಲಿನ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ಕೊಡಿದ ಬಾಗಿನದಿಂದ ದೇವತೆಯ ಕೃಪೆಯಾಗಿ ಜೀವಕ್ಕೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ.
ಬಾಗಿನ ವಸ್ತುಗಳು :– ಇತ್ತೀಚೆಗೆ ಸಾಬೂನು, ಪ್ಲಾಸ್ಟಿಕ್‌ನ ವಸ್ತುಗಳಂತಹ ನಿರುಪಯುಕ್ತ ವಸ್ತುಗಳನ್ನು ಬಾಗಿನ ವೆಂದು ಕೊಡುವ ಅಯೋಗ್ಯ ಪದ್ಧತಿಯು ರೂಢಿಯಲ್ಲಿದೆ. ಈ ವಸ್ತುಗಳ ಬದಲಿಗೆ ಸೌಭಾಗ್ಯದ ವಸ್ತುಗಳು, ಧಾರ್ಮಿಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ಅಧ್ಯಾತ್ಮಕ್ಕೆ ಪೂರಕವಾಗಿರುವ ವಸ್ತುಗಳನ್ನು ಕೊಡಬೇಕು. ಇಲ್ಲಿ ಬಾಗಿನ ನೀಡುವ ವಸ್ತುಗಳು ಸತ್ತ್ವಪ್ರಧಾನವಾಗಿರಬೇಕು. ಸದ್ಯ ಅಸಾತ್ತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡುತ್ತಾರೆ. ಸಾತ್ತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡಿದಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ.
ಸಾತ್ತ್ವಿಕ ವಸ್ತುಗಳಿಂದಾಗಿ ಜೀವದಲ್ಲಿನ ಜ್ಞಾನಶಕ್ತಿ (ಪ್ರಜ್ಞಾಶಕ್ತಿ) ಮತ್ತು ಭಕ್ತಿಯು ಜಾಗೃತವಾಗುತ್ತದೆ ಮತ್ತು ಅಸಾತ್ತ್ವಿಕ ವಸ್ತುಗಳಲ್ಲಿ ಮಾಯಾವಿ ಸ್ಪಂದನಗಳ ಪ್ರಮಾಣವು ಹೆಚ್ಚಿರುವುದರಿಂದ ಜೀವದಲ್ಲಿನ ಆಸಕ್ತಿಯು ಹೆಚ್ಚುತ್ತದೆ.
ಸಾತ್ತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡುವಾಗ ಉದ್ದೇಶವು ಶುದ್ಧ ಮತ್ತು ಪ್ರೇಮಭಾವವು ಅಧಿಕವಾಗಿರುವುದರಿಂದ ನಿರಪೇಕ್ಷತೆಯು ಬರುತ್ತದೆ. ಇದರಿಂದ ಕೊಡುಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗುವುದಿಲ್ಲ. ತದ್ವಿರುದ್ಧವಾಗಿ ಅಸಾತ್ತ್ವಿಕ ವಸ್ತುಗಳನ್ನು ಬಾಗಿನವೆಂದು ಕೊಡುವಾಗ ಅಪೇಕ್ಷೆ, ಆಸಕ್ತಿಗಳ ಪ್ರಮಾಣವು ಹೆಚ್ಚಿರುವುದರಿಂದ ಕೊಡುಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗುತ್ತದೆ.
ಮಣ್ಣಿನ ಮಡಕೆ :– ಸಂಕ್ರಾಂತಿಯ ಹಬ್ಬಕ್ಕೆ ಸಣ್ಣ ಮಣ್ಣಿನ ಮಡಕೆಗಳು ಬೇಕಾಗುತ್ತವೆ. ಅವುಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿ ದಾರವನ್ನು ಸುತ್ತುತ್ತಾರೆ. ಮಡಕೆಗಳಲ್ಲಿ ಗಜ್ಜರಿ, ಬೋರೇಹಣ್ಣು, ಕಬ್ಬಿನ ತುಂಡು, ನೆಲಗಡಲೆ, ಹತ್ತಿ, ಕಡಲೆಕಾಳು, ಎಳ್ಳುಬೆಲ್ಲ, ಅರಿಶಿನ ಕುಂಕುಮ ಮುಂತಾದವುಗಳನ್ನು ತುಂಬಿಸುತ್ತಾರೆ. ರಂಗೋಲಿಯನ್ನು ಬಿಡಿಸಿ ಮಣೆ ಹಾಕಿ ಅದರ ಮೇಲೆ ಐದು ಮಡಕೆಗಳನ್ನಿಟ್ಟು ಅವುಗಳ ಪೂಜೆಯನ್ನು ಮಾಡುತ್ತಾರೆ. ಮೂರು ಮಡಕೆಗಳನ್ನು ಸೌಭಾಗ್ಯವತಿಯರಿಗೆ ದಾನವೆಂದು (ಬಾಗಿನ) ನೀಡುತ್ತಾರೆ, ಒಂದು ಮಡಕೆಯನ್ನು ತುಳಸಿಗೆ ಮತ್ತು ಇನ್ನೊಂದನ್ನು ತಮಗಾಗಿ ಇಟ್ಟುಕೊಳ್ಳುತ್ತಾರೆ. ಸೌಭಾಗ್ಯವತಿ ಸ್ತ್ರೀಯು ಮಕರಸಂಕ್ರಾಂತಿಯ ದಿನ ಇನ್ನೋರ್ವ ಸೌಭಾಗ್ಯವತಿ ಸ್ತ್ರೀಗೆ ಬಾಗಿನವನ್ನು ನೀಡಿ ಉಡಿ ತುಂಬುವುದೆಂದರೆ ಇನ್ನೋರ್ವ ಸ್ತ್ರೀಯಲ್ಲಿನ ದೇವಿತತ್ತ್ವದ ಪೂಜೆಯನ್ನು ಮಾಡಿ ಅವಳಿಗೆ ತನು, ಮನ ಮತ್ತು ಧನದಿಂದ ಸಂಪೂರ್ಣ ಶರಣಾಗುವುದು.
ಎಳ್ಳಿನ ಮಹತ್ತ್ವ ಹಾಗೂ ಉಪಯೋಗ :–
ಸಂಕ್ರಾಂತಿಯಲ್ಲಿ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ, ಉದಾಹರಣೆಗೆ ಎಳ್ಳುನೀರಿನಿಂದ ಸ್ನಾನ ಮಾಡಿ ಎಳ್ಳು ಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು, ಬ್ರಾಹ್ಮಣರಿಗೆ ಎಳ್ಳು ದಾನ ಮಾಡುವುದು, ಶಿವಮಂದಿರದಲ್ಲಿ ಎಳ್ಳೆಣ್ಣೆಯ ದೀಪಗಳನ್ನು ಹಚ್ಚುವುದು, ಪಿತೃಶ್ರಾದ್ಧ ಮಾಡುವುದು, ಇದರಲ್ಲಿ ತಿಲಾಂಜಲಿ ನೀಡುತ್ತಾರೆ.
ತಿಲಸ್ನಾಯಿ ತಿಲೋದ್ವರ್ತಿ ತಿಲಹೋಮಿ ತಿಲೋದಕೀ |
ತಿಲಬುಕ್ ತಿಲದಾತ ಚ ಷಟ್ತಿಲ. ಪಾಪನಾಶನಃ ||
ಮಕರ ಸಂಕ್ರಮಣ ದಂದು ಯಾರು ಎಳ್ಳು ಹಚ್ಚಿ ಸ್ನಾನ,ಎಳ್ಳು ದಾನ ಎಳ್ಳು ಭಕ್ಷಣ,ಎಳ್ಳಿನಿಂದ ತರ್ಪಣ ಎಳ್ಳೆಣ್ಣೆಯ ದೀಪಹಚ್ಚುವರೋ ಅವರ ಪಾಪಗಳು ನಾಶವಾಗುವುದು.
ಭೋಗಿಹಬ್ಬ :–
ಭೋಗಿಹಬ್ಬ ಧನುರ್ಮಾಸದ ಕೊನೆಯದಿನ. “ಮಕರಸಂಕ್ರಾಂತಿ ” ವರ್ಷದ ವಿಶೇಷ ಮೊದಲಹಬ್ಬ.
ಭೋಗಿಹಬ್ಬದಂದು ಸಾಮಾನ್ಯವಾಗಿ ದಾನಕ್ಕೆ ಪ್ರಾಮುಖ್ಯತೆ. ಮೊದಲ ದಿನ ಭೋಗಿಹಬ್ಬ. ಸೂರ್ಯ ಮೂಡುವ ಮುನ್ನವೇ ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಅಂದರೆ ಪೊರಕೆ, ಬುಟ್ಟಿ, ಮುರಿದ ಮರದ ಸಾಮನುಗಳನ್ನು, ನಾಲ್ಕು ರಸ್ತೆಗಳು ಕೂಡುವಲ್ಲಿ ಸೇರಿಸಿ ಬೆಂಕಿ ಹಚ್ಚುತ್ತಾರೆ. ಹೊಸವಸ್ತುಗಳಿಂದ ಹೊಸಜೀವನ ಆರಂಭಿಸುವ ಉದ್ದೇಶದಿಂದ ಆಚರಿಸುವ ಈ ದಿನವನ್ನು ಭೋಗಿಹಬ್ಬ ಎಂದು ಕರೆಯುತ್ತಾರೆ.
ಮೊದಲನೆಯ ದಿನ ಭೋಗಿಹಬ್ಬ. ಮನೆಯನ್ನು ಅಲಂಕರಿಸಿ ಹೊಸಬಟ್ಟೆ ಧರಿಸಿ ಅರಸಿನ ಅಥವಾ ಸಗಣಿ ಬಳಸಿ ಪಿಳ್ಳಾರಿ (ಗಣಪ) ಮಾಡಿ, ಪೂಜಿಸಿ ಹುಗ್ಗಿ ನೈವೇದ್ಯ ಮಾಡುತ್ತಾರೆ. ಸಂಕ್ರಾಂತಿಯ ಎರಡನೆಯ ದಿನ ಜನರು ಹೊಸಬಟ್ಟೆ ಧರಿಸಿ, ಮನೆಯಲ್ಲಿ ಹಾಲು ಉಕ್ಕಿಸಿ, ಅದರಿಂದ ಸಿಹಿತಿಂಡಿಗಳನ್ನು ತಯಾರಿಸಿ ಮನೆಮಂದಿಯೆಲ್ಲ ತಿನ್ನುತ್ತಾರೆ. ಅಂದು ಸಾಮಾನ್ಯವಾಗಿ ಪಿತೃತರ್ಪಣವನ್ನು ಅರ್ಪಿಸುವ ರೂಢಿಯೂ ಕಂಡುಬರುತ್ತದೆ. ಮೂರನೆಯ ದಿವಸ ಕನುಮ ಪಂಡುಗ ಎಂದು ಕರೆಯುವ ಈ ಹಬ್ಬದಲ್ಲಿ ಬಣ್ಣಬಣ್ಣದ ರಂಗೋಲಿ ಹಾಕಿ ಅದರ ಮಧ್ಯೆ ಸೆಗಣಿಯಿಟ್ಟು ಕುಂಬಳ ಹೂವಿನಿಂದ ಅಲಂಕರಿಸುತ್ತಾರೆ ಅವುಗಳನ್ನು ಗೊಬ್ಬೆಮ್ಮ ಅಥವಾ ಗೊಬ್ಬಿಳ್ಳು ಎಂದು ಕರೆಯುತ್ತಾರೆ. ಅವುಗಳನ್ನು ಹಸುಗಳಿಂದ ತುಳಿಸುತ್ತಾರೆ. ಈ ದಿನ ವರ್ಷಪೂರ್ತಿ ಬೇಸಾಯಕ್ಕೆ ಸಹಾಯಮಾಡಿದ ಪಶುಪಕ್ಷಿಗಳಿಗೂ ಕೃತಜ್ಞತೆಯನ್ನು ಅರ್ಪಿಸುತ್ತಾರೆ. ತಮಿಳುನಾಡಿನಲ್ಲಿ ಪೊಂಗಲ್‌ ಹಬ್ಬವನ್ನು ನಾಲ್ಕು ದಿನಗಳ ಕಾಲ ಆಚರಿಸುತ್ತಾರೆ.
ಧನುರ್ಮಾಸದಲ್ಲಿ ತಿಂಗಳು ಪೂರಾ ಪ್ರಾತಃಕಾಲದಲ್ಲೆದ್ದು ಶುದ್ಧರಾಗಿ ದೇವರಪೂಜೆಮಾಡಿ ವಿಷ್ಣುವಿಗೆ ಪ್ರಿಯವಾದ ಮುದ್ಗಾನ್ನ ಅಂದರೆ ಹುಗ್ಗಿಯನ್ನೇ ನೈವೇದ್ಯ ಮಾಡಬೇಕು ಇದು ಇವತ್ತಿಗೆ ಮುಗಿಯುತ್ತದೆ. ಎಷ್ಟೋಜನರಿಗೆ ಅನಿವಾರ್ಯ ಕಾರಣಗಳಿಂದಾಗಿ ತಿಂಗಳಿಡೀ ಹುಗ್ಗಿ ನೈವೇದ್ಯ ಮಾಡಲಾಗಿರುವುದಿಲ್ಲ. ಅಂತಹವರೂ ಸೇರಿ ಇವತ್ತು ಹುಗ್ಗಿಯ ಸಾಮಾನುಗಳನ್ನು ಅಂದರೆ, ಹೆಸರುಬೇಳೆ , ಅಕ್ಕಿ, ಬೆಲ್ಲ, ತುಪ್ಪ , ಕೊಬ್ಬರಿ, ಕುಂಬಳಕಾಯಿಯನ್ನು ದಕ್ಷಿಣೆ ತಾಂಬೂಲದೊಂದಿಗೆ ಬ್ರಾಹ್ಮಣರಿಗೆ ದಾನ ಮಾಡಿದಲ್ಲಿ ಅವರಿಗೆ ಶಾಶ್ವತ ಸುಖ ಆಯುರಾರೋಗ್ಯ, ಧನಕನಕ ಕೊಟ್ಟು ನೆಮ್ಮದಿ ಶಾಂತಿ ದೇವರ ಕೃಪೆ ಸಿಗುವುದೆಂದು ಪುರಾಣಗಳಲ್ಲಿ ತಿಳಿಸಿದ್ದಾರೆ.
“ಮಕರ ಸಂಕ್ರಾಂತಿ” ಇದಕ್ಕೇ ಆದ ವಿಶೇಷ ಮಹತ್ವವಿದೆ – ಮಕರ ಸಂಕ್ರಮಣವೆಂದರೆ – ಜಗತ್ತಿಗೇ ದೇವನಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಮಕರಸಂಕ್ರಮಣ ಎನ್ನುತ್ತಾರೆ.ಒಂದು ವರ್ಷದಲ್ಲಿ 12 ಮಾಸಗಳು, ಅದನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ ಎಂದು. ಸೂರ್ಯನು ಧನಸ್ಸು ರಾಶಿಯಿಂದ ಮಕರ ರಾಶಿ ಸೇರುವ ದಿನವನ್ನು “ಮಕರ ಸಂಕ್ರಾಂತಿ” ಎನ್ನುವರು. ಇನ್ನು 6 ತಿಂಗಳಕಾಲ ಉತ್ತರಾಯಣ ಪುಣ್ಯಕಾಲ, ಪುರಾಣ ಮತ್ತು ಇತಿಹಾಸದಲ್ಲಿ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಈ ಸಮಯದಲ್ಲಿ ಸತ್ತವರಿಗೆ ನೇರ ಸ್ವರ್ಗಕ್ಕೇ ಪ್ರವೇಶವೆಂದೇ ನಂಬಿಕೆ !!
ಮಹಾಭಾರತದಲ್ಲಿ ಪಿತಾಮಹರಾದ ಭೀಷ್ಮರು ಶರಶಯ್ಯೆಯಲ್ಲಿ ಮಲಗಿ ಉತ್ತರಾಯಣ ಪುಣ್ಯಕಾಲ ಬರುವವರೆಗೂ ಕಾದಿದ್ದು ಸಾವನ್ನು ಬರಮಾಡಿಕೊಂಡರೆಂದು ನಾವೆಲ್ಲಾ ಓದಿದ್ದೇವೆ ಅಲ್ಲವೇ ? ಅವರು ಇಚ್ಛಾ ಮರಣಿಯಾಗಿದ್ದರು.

ಕೃತಯುಗದಲ್ಲಿ ಶಿವಪಾರ್ವತಿಯರ ವಿವಾಹವಾಗಿದ್ದು, ಬ್ರಹ್ಮದೇವನು ಈ ಜಗತ್ಯಿನ ಸೃಷ್ಟಿಯನ್ನು ಆರಂಭಿಸಿದ್ದು, ಸಮುದ್ರಮಥನದಲ್ಲಿ ಶ್ರೀ ಲಕ್ಷ್ಮೀ ಅವತರಿಸಿದ್ದು ಎಲ್ಲಾ ಈ ಉತ್ತರಾಯಣದಲ್ಲೇ. ಆದ್ದರಿಂದ ಈ ಸಮಯದಲ್ಲಿ ವಿವಾಹ, ಗೃಹ ಪ್ರವೇಶ ಇತರೇ ಎಲ್ಲಾ ಶುಭಕಾರ್ಯಗಳಿಗೂ ತುಂಬಾ ವಿಶೇಷವಾದದ್ದಾಗಿದೆ.

ವಿಶೇಷವಾಗಿ ಈ ದಿನ ಸಂಕ್ರಮಣ ಸ್ನಾನ, ನದೀ ಸಮುದ್ರಗಳಲ್ಲಿ ಸ್ನಾನ ಮಾಡಿ ಸೂರ್ಯನಿಗೆ ತರ್ಪಣ ಕೊಡುವುದೂ ಅತೀ ವಿಶೇಷವಾಗಿ ಉತ್ತರಭಾರತದಲ್ಲಿ ಆಚರಿಸುತ್ತಾರೆ. ಅದೇ ಕಾರಣದಿಂದ ಕುಂಭಮೇಳದಲ್ಲಿ ಕೋಟಿ, ಲಕ್ಷಾಂತರ ಜನರು ಸೇರುತ್ತಾರೆ.
ಇನ್ನು ವೈಜ್ಞಾನಿಕವಾಗಿಯೂ ನೋಡಿದಾಗ ಚಳಿಗಾಲದಲ್ಲಿ ಚರ್ಮಗಳು ಒಡೆದು ಕಾಂತಿಹೀನವಾಗುವುದನ್ನು ಈ ಎಳ್ಳಿನ ಮಿಶ್ರಣ ತಪ್ಪಿಸುತ್ತದೆ. ಅದರಲ್ಲಿರುವ ಎಳ್ಳು, ಕೊಬ್ಬರಿ, ಬೆಲ್ಲ, ಹುರಿಗಡಲೆ ಎಲ್ಲಾ ಮೈಗೆ ಕಾಂತಿಕೊಟ್ಟು ಶಾಖವನ್ನು ಉತ್ಪತ್ತಿ ಮಾಡಿ ಬೆಚ್ಚಗಿಡುತ್ತದೆ. ನಮ್ಮ ಹಿರಿಯರ ಶಾಸ್ತ್ರ ಸಂಪ್ರದಾಯದಲ್ಲಿ ವೈಜ್ಞಾನಿಕವಾಗಿ ಸಾಮ್ಯತೆ ಇರುವುದನ್ನು ಪ್ರತೀಯೊಂದರಲ್ಲೂ ಕಾಣುತ್ತೇವೆ.
ಇನ್ನು ಈ ಸಂಕ್ರಾಂತಿಯ ಹಬ್ಬವನ್ನು ದೇಶದ ವಿದೇಶಗಳಲ್ಲಿ ಎಲ್ಲಾ ಕಡೆಯೂ ಆಚರಿಸುತ್ತಾರೆ. ತಮಿಳುನಾಡಿನಲ್ಲಿ, ಆಂಧ್ರದಲ್ಲಿ, ಕೇರಳದಲ್ಲಿ, ಮಹಾರಾಷ್ಟ್ರದಲ್ಲಿ ಕೂಡಾ ಈ ಹಬ್ಬ ಬಹಳ ಜೋರಾಗಿತ್ತದೆ. ಆಚರಣೆಯ ಹೆಸರಲ್ಲಿ ವ್ಯತ್ಯಾಸ ಅಷ್ಟೇ. ಎಲ್ಲಾ ಕಡೆಯೂ ಸಿಹಿಪೊಂಗಲ್, ಎಳ್ಳುಬೆಲ್ಲದ ಮಿಶ್ರಣ, ಕಬ್ಬು ಇವುಗಳೇ ವಿಶೇಷವಾಗಿದೆ. ಇಲ್ಲಿ ಸೂರ್ಯದೇವನ ಆರಾಧನೆಯೇ ಪ್ರಮುಖವಾಗಿದೆ ಎನ್ನಬಹುದು. ಮಹಾರಾಷ್ಟ್ರದಲ್ಲಿ ಎಳ್ಳಿನ ಮಿಶ್ರಣದಿಂದ ಉಂಡೆಮಾಡಿ ಹಂಚುತ್ತಾರೆ.
ಇನ್ನು ಬೆಳಗಿನ ಪೂಜೆ ನೈವೇದ್ಯ ಊಟ ಎಲ್ಲಾ ಮುಗಿಸಿ ಸಂಜೆ ಮನೆಯ ಹೆಣ್ಣುಮಕ್ಕಳ ಸಡಗರ ಸಂಭ್ರಮ ಅತೀ ಜೋರಾಗಿತ್ತದೆ. ಒಂದುವಾರವಿಡೀ ಕಷ್ಟಪಟ್ಟು ಹಬ್ಬಕ್ಕೆ ತಯಾರಿಸಿದ ಸಕ್ಕರೆ ಅಚ್ಚು, ಎಳ್ಳು, ಬಾಳೆಹಣ್ಣು, ಕಬ್ಬು ಎಲ್ಲವನ್ನೂ ಚೀಲಗಳಲ್ಲಿ ತುಂಬಿಸಿಕೊಂಡು, ಹೊಸ ಬಟ್ಟೆ ಧರಿಸಿ, ಸಿಂಗಾರವಾಗಿ ಎಲ್ಲಾ ನೆಂಟರಿಷ್ಟರ ಮನೆ ಮನೆಗೂ, ಸ್ನೇಹಿತರ ಮನೆಗೂ, ಅಕ್ಕಪಕ್ಕದ ಮನೆಗಳಿಗೂ ಎಳ್ಳುಬೀರುವ ಅವರ ಸಂಭ್ರಮವನ್ನು ನೋಡಲು ಎರಡು ಕಣ್ಣು ಸಾಲದು. ಅವರ ಸಂತಸ ಸಡಗರ ಸಂಭ್ರಮ ಹಬ್ಬದ ಖುಷಿಯನ್ನು ಹೆಚ್ಚಿಸುತ್ತದೆ.
ಇನ್ನು ಕೆಲವರ ಮನೆ ಸಂಪ್ರದಾಯದಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳ ಕೈಯಿಂದ ಸಂಕ್ರಾಂತಿ ಬಾಗಿನ ಕೊಡಿಸುವ ಪದ್ಧತಿ ಉಂಟು. ಮೊದಲನೇ ವರ್ಷ ಐದು ಬಾಳೆಹಣ್ಣಿನ ಜೊತೆ, ತೆಂಗಿಕಾಯಿ, ಬ್ಲೋಸ್ ಪೀಸ್, ಎಲಚೆಹಣ್ಣು, ಸಂಕ್ರಾತಿ ಎಳ್ಳಿನ ಸಾಮಾನುಗಳನ್ನು ಇಟ್ಟು ಎಲೆಅಡಿಕೆ ದಕ್ಷಿಣೆ ಸಮೇತ ಐದು ಜನ ಹಿರಿಯ ಮುತ್ತೈದೆಯರಿಗೆ ಕೊಡಿಸುತ್ತಾರೆ. ಇದನ್ನು ಐದು ವರ್ಷಗಳ ಕಾಲ ಐದರಷ್ಟು ಹಣ್ಣುಗಳನ್ನು ಹೆಚ್ಚಿಸಿ ಕೊಡುತ್ತಾ ಅಷ್ಟರಲ್ಲಿ ಮಗುವಾದರೆ ಬಾಗಿನದ ಜೊತೆ ಗಂಡು ಮಗುವಾದರೆ ಪುಟ್ಟ ಬೆಳ್ಳಿ ಕೃಷ್ಣನನ್ನು ಕೊಬ್ಬರಿ ಬಟ್ಟಲಲ್ಲಿಟ್ಟು, ಹೆಣ್ಣು ಮಗುವಾದರೆ ಕೊಬ್ಬರಿ ಬಟ್ಟಿನಲ್ಲಿ ಬೆಳ್ಳಿಬಟ್ಟಲನ್ನಿಟ್ಟು ಬಾಗಿನ ಕೊಡಿಸುವರು. ನಮ್ಮಲ್ಲಿ ಆಚರಣೆಯಲ್ಲಿರುವ ಸಂಪ್ರದಾಯವನ್ನು ಅದೆಷ್ಟು ಹೇಳಿದರೂ ಸಾಲದು. ಎಲ್ಲಾ ದಾನಧರ್ಮ ಮಾಡಿಸಲು ಮತ್ತು ಹಬ್ಬದ ನೆವದಲ್ಲಾದರೂ ನೆಂಟರಿಷ್ಟರ ಮನೆಗಳಿಗೆ ಹೋಗಿ ಬರಲೆಂದೇ ಈ ಪದ್ಧತಿಗಳನ್ನು ಮೇಲ್ಪಂಕ್ತಿಯಾಗಿಸಿದ್ದಾರೆ ನಮ್ಮ ಹಿರಿಯರು.
ಇನ್ನು ಕೊನೆಯದಾಗಿ ಇಂದು ಎತ್ತು ದನಕರುಗಳಿಗೆ ವಿಶ್ರಾಂತಿನೀಡಿ ಬೆಳಗ್ಗೆ ಅವುಗಳನ್ನು ಚೆನ್ನಾಗಿ ಮೈತೊಳೆದು ಸ್ನಾನಮಾಡಿಸಿ ಮೈಗೆಲ್ಲಾ ಬಣ್ಣಗಳನ್ನು ಹಚ್ಚಿ ಸಿಂಗರಿಸಿ ಕೊಟ್ಟಿಗೆ ಶುದ್ಧ ಮಾಡಿ ಕಟ್ಟಿ, ದೇವರ ಪೂಜಾನಂತರ ಹಸುಗಳಿಗೂ ಪೂಜಿಸಿ ಹೂಮಾಲೆ ಹಾಕಿ ಗೋಮಾತೆಗೆ ಗೋಗ್ರಾಸವನ್ನಿಟ್ಟು ಮಂಗಳಾರತಿ ಮಾಡಿ ಭೂಮಾತೆ ಗೋಮಾತೆ ಹೆತ್ತ ಮಾತೆಗೆ ಸಮ ಎಂದು ನಮಿಸುತ್ತಾರೆ. ಸಂಜೆ ಆಯಾ ಬಡಾವಣೆಯಲ್ಲಿ ರಸ್ತೆಯ ಮಧ್ಯಭಾಗದಲ್ಲಿ ಒಣಹುಲ್ಲಿನ ಕಿಚ್ಚುಹಚ್ಚಿ ಅದರ ಮೇಲೆ ಎತ್ತು ಹಸು ಕರುಗಳ ದೃಷ್ಟಿ ಪರಿಹಾರವಾಗಲೆಂದು ಹಾರಿಸಿ ದಾಟಿಸಿಸುತ್ತಾರೆ.
ಸ್ನೇಹಿತರೇ ಬಹಳ ದೀರ್ಘವಾದ ವಿವರಣೆ, ಆದರೂ ಸಾವಧಾನದಿಂದ ಓದಿ. ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ. ಎಳ್ಳು ಹಬ್ಬ ಮುಗಿದರೂ ಎಳ್ಳು ಬೀರುವುದು ಒಂದೇ ದಿವಸಕ್ಕೆ ಮುಗಿಯುವುದಿಲ್ಲ. ಇದು ಒಂದು ವಾರದವೆಗೂ ನೆಡೆಯುವ ಹಬ್ಬ. ರಜಾದಿವಸಗಳಲ್ಲಿ, ಬಿಡುವಾದಾಗ ಹೋಗಿ ನೆಂಟರಿಷ್ಟರನ್ನು ಭೇಟಿಯಾಗಿ ಕ್ಷೇಮಸಮಾಚಾರ ವಿಚಾರಿಸಿ ಎಳ್ಳುಬೀರಿ ನಾಲ್ಕಾರು ಒಳ್ಳೆಯ ಮಾತುಗಳನ್ನಾಡಿ ಬನ್ನಿ. “ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಾಡಿ” ಎಂಬುದೇ ಹಬ್ಬದ ಸಂದರ್ಭದ ವಿಶೇಷ.
ಸಮಸ್ತ ಹಿಂದೂ ಬಾಂಧವರಿಗೂ
ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

ಸ್ವರ್ಣ ಕುಂದಾಪುರ

 

 

Related Articles

error: Content is protected !!