ರಾಮಾಯಣದಲ್ಲಿ ಪ್ರಮುಖ ತಿರುವೊಂದನ್ನು ಕೊಡುವ ಸನ್ನಿವೇಶವೇ ಶ್ರೀರಾಮನು ಚಿನ್ನದ ಜಿಂಕೆಯ ರೂಪದಲ್ಲಿದ್ದ ಮಾರೀಚನನ್ನು ವಧೆ ಮಾಡುವುದು . ಸೀತಾದೇವಿಯು ಚಿನ್ನದ ಬಣ್ಣದ ಜಿಂಕೆ ಒಂದನ್ನು ಕಂಡಾಗ ಅದು ತನಗೆ ಬೇಕೆಂದು ಶ್ರೀರಾಮಚಂದ್ರನಲ್ಲಿ ಕೇಳಿಕೊಳ್ಳುತ್ತಾಳೆ . ಶ್ರೀರಾಮಚಂದ್ರನು ಆಕೆಗೆ ಇದು ಯಾವುದಾದರೂ ಮಾಯೆ ಇರಬಹುದು ಎಂದು ಎಷ್ಟೇ ಹೇಳಿದರು ಸೀತಾದೇವಿಯು ತನ್ನ ಹಠವನ್ನು ಬಿಡುವುದಿಲ್ಲ . ಚಿನ್ನದ ಜಿಂಕೆಯನ್ನು ಬೆನ್ನಟ್ಟಿಕೊಂಡು ಹೋಗಿ ಶ್ರೀ ರಾಮನ ಬಾಣದಿಂದ ಚಿನ್ನದ ಜಿಂಕೆ ಆಗಿದ್ದ ಮಾರೀಚನು ಹತನಾದ ಕ್ಷೇತ್ರವೇ ಮೃಗ ವಧೆ . ಮೃಗವಧೆ ಗ್ರಾಮವು ತೀರ್ಥಹಳ್ಳಿಯಿಂದ ಸುಮಾರು 25 km ದೂರದಲ್ಲಿದೆ . ಶ್ರೀರಾಮಚಂದ್ರನು ಮಾರೀಚನನ್ನು ಹತ್ಯೆ ಮಾಡಿದ ಸ್ಥಳ ಇದಾದರಿಂದ ಈ ಕ್ಷೇತ್ರಕ್ಕೆ ಮಾರಿಚ ಮೃಗ ವಧೆ ಎಂಬ ಹೆಸರು ಬಂದಿತು. ಪ್ರಕೃತಿಯ ರಮಣೀಯ ಸ್ಥಳದಲ್ಲಿದೆ ಮೃಗ ವಧೆ ಕ್ಷೇತ್ರ . ಮಾರಿಚನ ವಧೆ ಮಾಡಿದ ಬಳಿಕ ಶ್ರೀರಾಮಚಂದ್ರ ಬ್ರಹ್ಮ ಹತ್ಯ ದೋಷದಿಂದ ಪಾರಾಗಲು ಬ್ರಾಹ್ಮಿ ನದಿಯ ತಟದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುತ್ತಾರೆ. ಮೊದಲು ಈ ಲಿಂಗಕ್ಕೆ ಮಲಹಾನಿಕರೇಶ್ವರಎಂಬ ಹೆಸರಿತ್ತು . ಈಗ ಈ ಶಿವಲಿಂಗ ಇರುವ ದೇವಸ್ಥಾನದ ಹೆಸರೇ ಮಲ್ಲಿಕಾರ್ಜುನ ದೇವಸ್ಥಾನ . ಶ್ರೀ ರಾಮನು ಪ್ರತಿಷ್ಠಾಪನೆ ಮಾಡಿದ ಶಿವಲಿಂಗಕ್ಕೆ 9ನೇ ಶತಮಾನದಲ್ಲಿ ರಾಷ್ಟ್ರಕೂಟರು ದೇವಸ್ಥಾನವನ್ನು ಕಟ್ಟಿದರು . ನಂತರ 10ನೇ ಶತಮಾನದಲ್ಲಿ ಚಾಲುಕ್ಯರು ತ್ರಿಭುವನ ಮಲ್ಲ ಎಂಬ ರಾಜನು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದನೆಂಬ ಪ್ರತೀತಿ ಇದೆ. ಮೃಗವಧೆ ಮಲ್ಲಿಕಾರ್ಜುನ ದೇವಸ್ಥಾನವು ಇಲ್ಲಿಯ ಮುಖ್ಯ ದೇವಸ್ಥಾನವಾದರೂ ಇಲ್ಲಿಯ ಶನೀಶ್ವರ ದೇವಸ್ಥಾನ ಕೂಡ ಅತ್ಯಂತ ಪೂಜ್ಯನೀಯ ಮತ್ತು ಭಕ್ತಿಯ ಸಂಕೇತವಾಗಿರುವ ದೇವಸ್ಥಾನ. ಇಲ್ಲಿಯ ಶನೇಶ್ವರ ದೇವಸ್ಥಾನ ಕೂಡ ಪೌರಾಣಿಕವಾಗಿ ಅತ್ಯಂತ ಹೆಸರನ್ನು ಹೊಂದಿದೆ. ಶಿವನು ಒಮ್ಮೆ ಶನಿಯ ಕಾಟಕ್ಕೆ ಒಳಗಾದಾಗ ಪಾರ್ವತಿಯು ಶನಿ ದೇವರ ಕುರಿತಾಗಿ ತಪಸ್ಸು ಮಾಡಿ ಶನಿ ದೇವರನ್ನು ಒಲಿಸಿಕೊಂಡ ಕ್ಷೇತ್ರ ಮೃಗವಧೆ . ಶನೇಶ್ವರ ದೇವಸ್ಥಾನದ ಎದುರು ಶನಿ ಮುಕ್ತನಾದ ಶಂಕರೇಶ್ವರ ಸ್ವಾಮಿಯು ನೆಲೆ ನಿಂತಿದ್ದಾರೆ . ಈ ಶನೇಶ್ವರ ದೇವಸ್ಥಾನಕ್ಕೆ ಬಂದು ಶನೇಶ್ವರ ದೇವರ ದರ್ಶನವನ್ನು ಪಡೆದರೆ ಅನೇಕ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯಿಂದ ಅಪಾರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ . ಮೃಗವಧೆ ಕ್ಷೇತ್ರದಲ್ಲಿ ನರಸಿಂಹ ಸ್ವಾಮಿ ದೇವಾಲಯವು ಕೂಡ ಇದೆ . ಮೃಗವಧೆ ಕ್ಷೇತ್ರ ಶ್ರೀ ರಾಮನ ಕೈಯಿಂದ ಪ್ರತಿಷ್ಠಾಪನೆಗೊಂಡ ಶಿವಲಿಂಗದ ಪುಣ್ಯಕ್ಷೇತ್ರವೆಂದು ಹೇಳಬಹುದು
ಪ್ರದೀಪ್,ಚಿನ್ಮಯಿ ಆಸ್ಪತ್ರೆ ಕುಂದಾಪುರ