Home » ಸರ್ವ ದೋಷಗಳನ್ನು ಪರಿಹಾರ ಮಾಡುವ ಮಹಾತಾಯಿ.
 

ಸರ್ವ ದೋಷಗಳನ್ನು ಪರಿಹಾರ ಮಾಡುವ ಮಹಾತಾಯಿ.

by Kundapur Xpress
Spread the love

ಮಲ್ಲ ಶ್ರೀ ದುರ್ಗಾಪರಮೇಶ್ವರಿ ಸರ್ವ ದೋಷಗಳನ್ನು ಪರಿಹಾರ ಮಾಡುವ ಮಹಾತಾಯಿ.
ತಾಯಿ ದುರ್ಗಾಪರಮೇಶ್ವರಿ ಭೂಮಿಯಲ್ಲಿ ದುಷ್ಟರನ್ನು ಸಂಹಾರ ಮಾಡಲು ಎತ್ತಿದ ಅವತಾರಗಳಿಗೆ ಲೆಕ್ಕವಿಲ್ಲ. ದೇವಿಯ ಬೇರೆ ಬೇರೆ ಅವತಾರಗಳೆಂದರೆ ವಿದ್ಯೆಗೆ ಅಧಿಪತಿಯಾಗಿ ಶಾರದಾಂಬೆಯಾಗಿ , ಸಕಲವನ್ನು ಕರುಣಿಸುವ ಅನ್ನಪೂರ್ಣೆ , ಸಂಪತ್ತನ್ನು ಕರುಣಿಸುವ ಮಹಾಲಕ್ಷ್ಮಿಯಾಗಿ ಹೀಗೆ ಬೇರೆ ಬೇರೆ ಅವತಾರಗಳಲ್ಲಿ ಮಾತೆ ದುರ್ಗಾಪರಮೇಶ್ವರಿಯು ಅವತ್ತಾರೆಯೆತ್ತಿದ್ದಾಳೆ

ಭಕ್ತರನ್ನ ಆಶೀರ್ವದಿಸಿ ಭಕ್ತರ ಕಷ್ಟಗಳನ್ನು ನೀಗಿಸಿ ಪವಾಡ ಸೃಷ್ಟಿಸುತ್ತಿರುವ ಕ್ಷೇತ್ರವೇ ಮಲ್ಲ. ಇಲ್ಲಿ ದುರ್ಗಾಪರಮೇಶ್ವರಿಯು ಬರುವ ಎಲ್ಲಾ ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ಅಭಯವನ್ನು ನೀಡುತ್ತಾಳೆ. ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಇರುವುದು ದೇವರ ನಾಡು ಎಂದು ಬಿಂಬಿತವಾಗಿರುವ ಕೇರಳದಲ್ಲಿ. ಕಾಸರಗೋಡಿನಿಂದ 16 ಕಿಲೋಮೀಟರ್ ದೂರದಲ್ಲಿದೆ ಈ ಮಲ್ಲ ದುರ್ಗಾಪರಮೇಶ್ವರಿ ಕ್ಷೇತ್ರ. ಈ ದೇಗುಲಕ್ಕೆ ಬಂದರೆ ಪರಿಹಾರವಾಗದೆ ಇರುವ ಸಮಸ್ಯೆಗಳಿಲ್ಲ. ಈ ದೇವಾಲಯಕ್ಕೆ ಸಂತಾನ ಭಾಗ್ಯ ಮತ್ತು ಕಂಕಣ ಭಾಗ್ಯವನ್ನು ಬಯಸಿ ಬರುವವರೇ ಅಧಿಕ. ಶ್ರೀ ದುರ್ಗಾಪರಮೇಶ್ವರಿಯ ದರ್ಶನ ಭಾಗ್ಯದಿಂದಲೇ ಭಕ್ತರ ಎಲ್ಲಾ ಸಮಸ್ಯೆ ಗಳು ಕಳೆದು ಹೋಗುತ್ತದೆ. ಇದಕ್ಕೆ ಇಲ್ಲಿ ಬರುವಂತಹ ಸಾವಿರಾರು ಭಕ್ತಾದಿಗಳೇ ಸಾಕ್ಷಿ. ಮಲ್ಲ ದುರ್ಗಾಪರಮೇಶ್ವರಿ ದೇಗುಲವು ಮದುವಾಹಿನಿ ನದಿಯ ತಟದಲ್ಲಿ ಪ್ರಕೃತಿಯ ಮಡಿಲಲ್ಲಿ ಶಾಂತವಾದ ಪರಿಸರದಲ್ಲಿ ನೆಲೆಸಿದೆ.

ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಅತ್ಯಂತ ಕಾರಣಿಕಗಳಿಂದ ಕೂಡಿದಂತಹ ದೇವಾಲಯ ಎಂದರೆ ತಪ್ಪಾಗಲಾರದು. ಈ ದೇಗುಲದಲ್ಲಿ ದುರ್ಗಾಪರಮೇಶ್ವರಿ ದೇವಿಯು ಶ್ರೀ ಚಕ್ರದ ದರ್ಪಣ ರೂಪದಲ್ಲಿ ಪೂಜೆಗೊಳ್ಳುತ್ತಾಳೆ. ಮಲ್ಲ ದುರ್ಗಾಪರಮೇಶ್ವರಿ ದೇವಿಯ ದೇಗುಲಕ್ಕೆ 400 ವರ್ಷಗಳಿಗಿಂತಲೂ ಹಿಂದಿನ ಇತಿಹಾಸವಿದೆ. ಮಲ್ಲಶ್ರೀ ದುರ್ಗೆ ಜೀವನದಲ್ಲಿ ನೊಂದು ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ದಂತಹ ಅನೇಕ ನಿದರ್ಶನಗಳಿವೆ. ಶುಕ್ರವಾರ ಮತ್ತು ಮಂಗಳವಾರ ಇಲ್ಲಿ ಭಕ್ತರ ಸಂಖ್ಯೆ ಜಾಸ್ತಿ ಇರುತ್ತದೆ. ದೇವಾಲಯದ ಗೋಪುರದ ಶಿಲ್ಪಕಲೆ ಮತ್ತು ಕೆತ್ತನೆಯ ಶೈಲಿ ಬಹಳ ಸುಂದರವಾಗಿದೆ. ಈ ದೇವಸ್ಥಾನದ ಇನ್ನೊಂದು ವಿಶೇಷತೆ ಎಂದರೆ ತೀರ್ಥ ಸ್ನಾನ . ಚರ್ಮದ ಸಮಸ್ಯೆ ಮತ್ತು ವಿಷದ ಸಮಸ್ಯೆ ಮತ್ತು ಇತರ ಸಮಸ್ಯೆಗಳಿಂದ ಬಳಲುವರಿಗೆ ಇಲ್ಲಿಯ ತೀರ್ಥ ಸ್ನಾನ ಅತ್ಯಂತ ಪವಿತ್ರವೆಂದು ಹೇಳಲಾಗುತ್ತದೆ. ದೇವಸ್ಥಾನದ ಗರ್ಭಗುಡಿಯಲ್ಲಿರುವ ಬಾವಿಯ ನೀರನ್ನು ತೀರ್ಥವೆಂದು ಪರಿಗಣಿಸಿ ಭಕ್ತರ ಮೇಲೆ ಹಾಕಲಾಗುತ್ತದೆ.ಮಲ್ಲದ ತೀರ್ಥ ಸ್ನಾನದಿಂದ  ಚರ್ಮರೋಗ ಮತ್ತು ವಿಷದ ಸಮಸ್ಯೆಗಳು ಪರಿಹಾರವಾದ ಅಂತಹ ಅನೇಕ ಭಕ್ತರುಗಳನ್ನು ನಾವು ಕಾಣಬಹುದು. ದುರ್ಗಾ ಪೂಜೆಯು ಇಲ್ಲಿನ ವಿಶೇಷವಾದಂತಹ ಒಂದು ಪೂಜೆ . ನವರಾತ್ರಿಯ ಸಮಯದಲ್ಲೂ ಕೂಡ ಶ್ರೀ ದುರ್ಗಾಪರಮೇಶ್ವರಿ ದೇವಿಯ ಅಲಂಕಾರ ಮತ್ತು ಪೂಜೆ ವಿಶೇಷವಾಗಿ ಇಲ್ಲಿ ನಡೆಯುತ್ತದೆ . ತುಲಾಭಾರ ಮತ್ತು ತೊಟ್ಟಿಲು ಸೇವೆ ಇಲ್ಲಿ ವಿಶೇಷವಾದ ಹರಕೆಯ ರೂಪದಲ್ಲಿ ಮಾಡಲಾಗುತ್ತದೆ. ವಿಜಯದಶಮಿಯ ದಿನ ತನ್ನ ಮಕ್ಕಳ ಮೊದಲ ಅಕ್ಷರ ಅಭ್ಯಾಸ ಮಾಡುವುದು ಕೂಡ ಇಲ್ಲಿಯ ಸೇವೆಗಳಲ್ಲಿ ಒಂದು. ಈ ದೇಗುಲದಲ್ಲಿ ಪ್ರತಿದಿನವೂ ಅನ್ನ ಸಂತರ್ಪಣೆ ಇರುತ್ತದೆ . ಮಲ್ಲ ಶ್ರೀ ದುರ್ಗಾಪರಮೇಶ್ವರಿ ಸಂತಾನ ಭಾಗ್ಯ, ಕಂಕಣ ಭಾಗ್ಯ , ಮತ್ತು ಭಕ್ತರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಮಾತೇ ಎಂದೇ  ಹೇಳಬಹುದು

ಪ್ರದೀಪ್‌ ,ಚಿನ್ಮಯಿ ಆಸ್ಪತ್ರೆ

 

Related Articles

error: Content is protected !!