ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯ ದೇವಸ್ಥಾನ ಕರ್ನಾಟಕದ ಪ್ರಸಿದ್ಧ ದುರ್ಗಾದೇವಿಯ ಪುಣ್ಯಕ್ಷೇತ್ರಗಳಲ್ಲಿ ಒಂದು . ಭಕ್ತರು ಬೇಡಿ ಬಂದ ಎಲ್ಲಾ ಇಷ್ಟಾರ್ಥಗಳನ್ನು ಅನುಗ್ರಹಿಸುವ ತಾಯಿ ಈ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿ. ಕುಬ್ಜ ನದಿಯ ದಡದಲ್ಲಿದೆ ಈ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯ ಸುಂದರವಾದ ದೇವಸ್ಥಾನ . ಇಲ್ಲಿ ದೇವಿಯು ಲಿಂಗದ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಕುಂದಾಪುರದಿಂದ 35km ದೂರದಲ್ಲಿದೆ ಕಮಲಶಿಲೆ ದೇವಸ್ಥಾನ. ಸುಂದರವಾದಂತಹ ಬೆಟ್ಟ ಗುಡ್ಡಗಳು ಮತ್ತು ಪ್ರಕೃತಿಯ ನಡುವೆ ಕಂಗೊಳಿಸುತ್ತಿದೆ ಕಮಲ ಶಿಲೆಯ ದೇವಸ್ಥಾನ . ಪುರಾಣಗಳ ಪ್ರಕಾರ ಕೈಲಾಸದಲ್ಲಿದ್ದ ಸುಂದರವಾದ ನೃತ್ಯಗಾತಿ ಪಿಂಗಳೆ ನರ್ತಿಸಲು ಒಪ್ಪದಿದ್ದಾಗ ಪಾರ್ವತಿ ಕೊಟ್ಟಂತಹ ಶಾಪದಿಂದ ಕುಬ್ಜೆಯಾಗಿ ಭೂಲೋಕದಲ್ಲಿ ಜನಿಸುತ್ತಾಳೆ .
ಪಿಂಗಳೆಯ ಶಾಪ ವಿಮೋಚನೆಗಾಗಿ ಪಾರ್ವತಿ ದೇವಿ ಸಹ್ಯಾದ್ರಿಯ ತಪ್ಪಲಿನಲ್ಲಿರುವ ಕಮಲಶಿಲೆಯ ಲಿಂಗದ ರೂಪದಲ್ಲಿ ಕಾಣಿಸಿಕೊಂಡಳು . ಭೂಲೋಕದಲ್ಲಿ ಕುಬ್ಜೆಯಾಗಿ ಹುಟ್ಟಿದ ಪಿಂಗಳೆ ತನ್ನ ಕುರೂಪಿ ಈ ಜನ್ಮದ ಮೋಕ್ಷಕ್ಕಾಗಿ ಕಮಲಶಿಲೆಯಲ್ಲಿರುವ ಗುಹೆ ಒಂದರಲ್ಲಿ ತಪಸ್ಸು ಮಾಡತೊಡಗುತ್ತಾಳೆ. ಪಾರ್ವತಿ ದೇವಿಯು ಗುಹೆಯಲ್ಲಿ ಹುಟ್ಟುವ ನಾಗತೀರ್ಥ ಮತ್ತು ಕುಬ್ಜಾನದಿಯ ಸಂಗಮ ಕ್ಷೇತ್ರದಲ್ಲಿ ಕಮಲಶಿಲೆಯ ಲಿಂಗದ ರೂಪದಲ್ಲಿ ಪ್ರತ್ಯಕ್ಷವಾಗುತ್ತಾಳೆ .
ದೇವಿಯು ಕುಬ್ಜೆಗೆ ಶ್ರೀ ಕೃಷ್ಣನ ಸ್ಪರ್ಶದಿಂದ ಆಕೆಯ ಶಾಪ ವಿಮೋಚನೆಯಾಗುತ್ತದೆ ಎಂದು ಹೇಳಲು ಕುಬ್ಜೆಯನ್ನು ಮಥುರೆಗೆ ತೆರಳು ಎಂದು ತಿಳಿಸುತ್ತಾಳೆ.ಮಥುರೆ ಪಟ್ಟಣದಲ್ಲಿ ಶ್ರೀ ಕೃಷ್ಣನ ಸ್ಪರ್ಶದಿಂದ ಕುಬ್ಜೆಯ ಶಾಪ ವಿಮೋಚನೆಯಾಗುತ್ತದೆ . ಕಮಲಿಶಿಲೆಯಲ್ಲಿ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿ ಪ್ರಧಾನವಾಗಿ ಪೂಜಿಸಲ್ಪಡುತ್ತಾಳೆ.