ಜೀವನ ಹರಿಯುವ ನೀರಿನಂತೆ, ಎಲ್ಲೂ ಒಂದೇ ಕಡೆ ನಿಲ್ಲದೆ ನಿರಂತರವಾಗಿ ಹರಿಯುತ್ತಾ ಒಂದು ದಿನ ಮುಕ್ತಿ ಎಂಬ ಮಹಾಸಾಗರ ಸೇರುತ್ತದೆ. ಜೀವನದಲ್ಲಿ ಸುಖ ದುಃಖಗಳು ಸಾಮಾನ್ಯ. ಹರಿಯುವ ನೀರು ಅನೇಕ ಪಥಗಳಲ್ಲಿ ಕಲ್ಲು ಬಂಡೆ ನದಿಗಳನ್ನು ದಾಟಿದಂತೆ, ಜೀವನವು ಕೂಡ ಸುಖ ದುಃಖ, ಕಷ್ಟ ,ಕಾರ್ಪಣ್ಯಗಳನ್ನು ದಾಟಿ ಮುಕ್ತಿಯನ್ನು ಪಡೆಯುತ್ತದೆ. ಜೀವನವೆಂಬುದು ಅನೇಕ ಘಟ್ಟಗಳಿಂದ ಕೂಡಿದ ಒಂದು ಬದುಕು. ಜೀವನವು ಹುಟ್ಟಿನಿಂದ ಹಲವಾರು ಘಟನೆ ದಾಟಿ ಮುಕ್ತಿ ಎಂಬ ಪಥವನ್ನು ಅಂತಿಮವಾಗಿ ಪ್ರಾಪ್ತಿ ಮಾಡುತ್ತದೆ.
ಬಾಲ್ಯಾವಸ್ಥೆ ಪ್ರೌಢಾವಸ್ಥೆ, ಗೃಹಸ್ಥಾಶ್ರಮ , ವೃದ್ಧಾಪ್ಯ ಇವುಗಳು ಎಲ್ಲರ ಜೀವನದಲ್ಲೂ ಹಾದು ಹೋಗಬೇಕಾಗಿರುವ ಅಂತಹ ಪ್ರಧಾನ ಘಟ್ಟಗಳು. ಅನೇಕರು ಅಧ್ಯಾತ್ಮವನ್ನು 60 ರ ನಂತರ ವಯಸ್ಸಿನಲ್ಲಿ ಬೇಕಾಗುವ ವಿದ್ಯೆಯೆಂದು ತಿಳಿದುಕೊಳ್ಳುತ್ತಾರೆ. ಅಧ್ಯಾತ್ಮದ ಪ್ರಾಮುಖ್ಯತೆ ಏನು? ಪರಮಾತ್ಮನನ್ನು ಸೇರುವುದಕ್ಕೆ ಆಧ್ಯಾತ್ಮದ ಅವಶ್ಯಕತೆ ಎಷ್ಟು ಬೇಕು? ಅಧ್ಯಾತ್ಮ ಕಲಿಯಲು ಗುರುಗಳ ಅವಶ್ಯಕತೆ ಇದೆಯೇ? ಅಧ್ಯಾತ್ಮ ಕಲಿಯಲು ಬೇಕಾಗುವ ಅರ್ಹತೆಗಳೇನು? ಅಧ್ಯಾತ್ಮ ನಮ್ಮನ್ನು ಯಾವ ಪಥದತ್ತ ಕೊಂಡೊಯ್ಯುತ್ತದೆ ? ಇವುಗಳು ನಮ್ಮ ಮನಸ್ಸಿಗೆ ಆಧ್ಯಾತ್ಮ ಎಂದಾಗ ಬರುವ ಸಾಮಾನ್ಯ ಪ್ರಶ್ನೆಗಳು.ಅಧ್ಯಾತ್ಮ ಎಂದರೆ ಪ್ರೀತಿ. ಅಧ್ಯಾತ್ಮ ಎಂದರೆ ಮುಗ್ಧತೆ. ಅಧ್ಯಾತ್ಮ ಎಂದರೆ ಅನುಭವಿಸುವಿಕೆ. ಅಧ್ಯಾತ್ಮ ಎಂದರೆ ಹುಡುಕು.
ಮನಸ್ಸನ್ನು ನಿಗ್ರಹಿಸಿ ಸಮಾಜದಲ್ಲಿ ಸಕಲ ಜೀವಿಗಳಲ್ಲೂ ಸಹ ಬಾಳುವೆ ನಡೆಸುವುದೇ ಅಧ್ಯಾತ್ಮದ ಮೊದಲ ಹಂತ. ನಿಷ್ಕಲ್ಮಶ ಪ್ರೀತಿಯಲ್ಲಿ ಜೀವನ ಸಾಗಿಸುವುದೇ ಅಧ್ಯಾತ್ಮ. ತಂದೆ, ತಾಯಿ, ಬಂಧು ಬಾಂಧವರಲ್ಲಿ ಕಪಟವಿಲ್ಲದ ನೈಜ ಅನುಬಂಧ ಅಧ್ಯಾತ್ಮ. ಪ್ರತಿ ಜೀವಿಯ ಉಸಿರಾಟವೇ ಅಧ್ಯಾತ್ಮ ಪ್ರಕೃತಿಯಲ್ಲಿರುವಂತಹ ರಹಸ್ಯಗಳನ್ನು ಪರಿಶೋಧನೆ ಮಾಡುವುದೇ ಅಧ್ಯಾತ್ಮ. ಆತ್ಮ ಮತ್ತು ಪರಮಾತ್ಮನನ್ನು ಸಂಧಿಸಲು ಬೇಕಾದ ಜ್ಞಾನವೇ ಅಧ್ಯಾತ್ಮ. ಅಧ್ಯಾತ್ಮ ಎಂದರೆ ನಮ್ಮ ಅಂತರಂಗದ ಬದಲಾವಣೆ . ಅಜ್ಞಾನದಿಂದ ಜ್ಞಾನದ ಕಡೆಗೆ ಕತ್ತಲೆಯಿಂದ ಬೆಳಕಿನ ಕಡೆಗೆ ಬರುವಂತ ಶಕ್ತಿ ಅಧ್ಯಾತ್ಮ ಎಂದರೆ ಆತ್ಮದ ಶುದ್ಧೀಕರಣ. ಅಧ್ಯಾತ್ಮ ಎಂದರೆ ತನ್ನನ್ನು ತಾನೇ ಅರಿತುಕೊಳ್ಳುವುದು. ರಾಮಕೃಷ್ಣ ಪರಮಹಂಸ , ವಿವೇಕಾನಂದ ಅಂಥವರು ಆಧ್ಯಾತ್ಮವನ್ನು ತುಂಬ ಸರಳವಾಗಿ ವಿವರಿಸಿದ್ದಾರೆ ಅಧ್ಯಾತ್ಮ ಒಂದು ಸುಂದರ ಅನುಭವ. ಒಂದು ಸಲ ಅಧ್ಯಾತ್ಮದ ಅನುಭವ ಪಡೆದವರು ಮತ್ತೆ ಅಧ್ಯಾತ್ಮದ ತುತ್ತ ತುದಿಗೆ ತಲುಪಿ ಸಾಧನೆ ಮಾಡಿದ ಅನೇಕ ಯೋಗಿಗಳಿದ್ದಾರೆ.
ಸನ್ಯಾಸತ್ವ ಜೀವನದ ಇನ್ನೊಂದು ಘಟ್ಟ. ತನ್ನ ಜೀವನದ ಎಲ್ಲಾ ವ್ಯವಸ್ಥೆಗಳನ್ನು ತ್ಯಜಿಸಿ, ಯೋಗಿಯಾಗಿ ಆಧ್ಯಾತ್ಮದ ಅಭೂತಪೂರ್ವ ಅನುಭವವನ್ನು ಪಡೆಯುವ ಒಂದು ಸುಂದರ ಜೀವನದ ಹಂತ ಸನ್ಯಾಸಿ ಜೀವನದಲ್ಲೂ ಅನೇಕ ಘಟ್ಟಗಳಿವೆ . ಸನ್ಯಾಸಿ ಜೀವನಕ್ಕೂ ಮುನ್ನ ಗುರುಗಳ ದೀಕ್ಷೆ ಅಗತ್ಯವಿರುತ್ತದೆ. ಸನ್ಯಾಸಿ ಜೀವನದ ಅನುಭವಗಳನ್ನು ಅನೇಕ ಪುಸ್ತಕಗಳಲ್ಲಿ ಸುಂದರವಾಗಿ ವರ್ಣಿಸಲಾಗಿದೆ. ಹಿಮಾಲಯದ ತಪ್ಪಲಿನಲ್ಲಿ ಸ್ವಾಮಿರಾಮ ಪುಸ್ತಕದಲ್ಲಿ ಸ್ವಾಮಿ ರಾಮರವರು ಸನ್ಯಾಸತ್ವದ ಅದ್ಭುತ ಅನುಭವಗಳನ್ನು ಸುಂದರವಾಗಿ ವರ್ಣಿಸಿದ್ದಾರೆ. ಹಿಮಾಲಯದ ಗುರುವಿನ ಗರಡಿಯಲ್ಲಿ ಒಬ್ಬ ಯೋಗಿಯ ಆತ್ಮಕಥೆ ಈ ಪುಸ್ತಕದಲ್ಲೂ ಕೂಡ ಸನ್ಯಾಸತ್ವದ ಅನುಭವ ಮತ್ತು ಅದ್ಭುತವಾದ ವಿವರಣೆ ಇದೆ. ನಿಗೂಢ ಭಾರತದಲ್ಲಿ ಒಂದು ಹುಡುಕಾಟ ಈ ಪುಸ್ತಕದಲ್ಲಿ ಆಲ್ ಬ್ರಾಂಟನ್ ರವರು ರಮಣ ಮಹರ್ಷಿಗಳಿಂದ ಪಡೆದ ಅದ್ಭುತವಾದಂತಹ ಅಧ್ಯಾತ್ಮದ ವಿವರಗಳಿವೆ. ಅಧ್ಯಾತ್ಮ ಸನ್ಯಾಸತ್ವ ಆತ್ಮ ಮತ್ತು ಪರಮಾತ್ಮ ಇವೆಲ್ಲವೂ ಸುಂದರ ಅನುಭವಗಳೇ…..
ಪ್ರದೀಪ್,ಚಿನ್ಮಯಿ ಆಸ್ಪತ್ರೆ