Home » ಸಾವಿನೊಂದಿಗೆ ಮಾಡುವ ಒಪ್ಪಂದದ ಮಧ್ಯಂತರ ಕಾಲವೇ ಜೀವನ
 

ಸಾವಿನೊಂದಿಗೆ ಮಾಡುವ ಒಪ್ಪಂದದ ಮಧ್ಯಂತರ ಕಾಲವೇ ಜೀವನ

ನುಡಿನಮನ

by Kundapur Xpress
Spread the love
‘ ಸಾವಿನೊಂದಿಗೆ ಮಾಡುವ ಒಪ್ಪಂದದ ಮಧ್ಯಂತರ ಕಾಲವೇ ಜೀವನ’

ಎಂದು ನುಡಿದವರು ಮಲೆಯಾಳದ ಮಹಾನ್ ಸಾಹಿತಿ-ಚಿತ್ರನಿರ್ದೇಶಕ,- ಚಿತ್ರ ಕಥೆಗಾರ, ಜ್ಞಾನಪೀಠ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಬಗಲಿಗೇರಿಸಿಕೊಂಡ ಮಹಾನ್ ಲೇಖಕ  ಎಂಟಿ. ವಾಸುದೇವನ್ ನಾಯರ್  ಈಗ ತಮ್ಮ 92 ನೇ ಯ ವಯಸ್ಸಿನಲ್ಲಿ ಸಾವಿನೊಂದಿಗೆ ಮಾಡಿದ ಒಪ್ಪಂದವನ್ನು ಮುಗಿಸಿ ಅವರು ಇತ್ತೀಚಿಗೆ ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು

ವಯಸ್ಸು ಎಷ್ಟೇ ಆಗಿರಲಿ, ನಮ್ಮ ಬದುಕಿನ ಒಂದು ಅನಿವಾರ್ಯ ಭಾಗವಾಗಿದ್ದು ಗುರು ಸಮಾನರಾಗಿದ್ದ ಅವರು ಬಿಟ್ಟುಹೋದ ಶೂನ್ಯವು ಮನಸ್ಸಿಗೆ ಅಪಾರ ನೋವುಂಟು ಮಾಡುತ್ತಿದೆ. ಅವರೊಂದಿಗೆ ಒಂದಷ್ಟು ಒಡನಾಟ ಮಾಡಿ ನೆನಪುಗಳನ್ನು ಸಂಚಯಿಸಿಕೊಂಡಿರುವ ನಿಟ್ಟಿನಲ್ಲಿ ಅವರಿಗೆ ಸಣ್ಣದೊಂದು ನುಡಿನಮನವನ್ನು ಸಲ್ಲಿಸಬೇಕೆಂದು ಮನಸ್ಸಾಗಿದೆ

ಆನುವಾದಗಳ ಮೂಲಕ ಕನ್ನಡದ ಓದುಗರಿಗೆ ಮಾತ್ರವಲ್ಲದೆ ಜಗತ್ತಿನ ಹಲವು ಭಾಷೆಗಳ ಓದುಗರಿಗೆ ಚಿರಪರಿತರಾದ  ವಾಸುದೇವನ್ ನಾಯರ್ ನಮ್ಮ ಊಹೆಗೂ ನಿಲುಕದ ಒಂದು ದೈತ್ಯ ಪ್ರತಿಭೆ. ಕೇರಳದ ನವೋದಯದ ಹಿನ್ನೆಲೆಯಲ್ಲಿ ಬಂದ ಅವರ ಮೊದಲ ಕಾದಂಬರಿಗಳು ಮತ್ತು ಸಣ್ಣ ಕಥೆಗಳು  ಸ್ವಾತಂತ್ರ್ಯ ಪೂರ್ವದಲ್ಲಿ ಕೂಡು ಕುಟುಂಬಗಳಾಗಿ  ವಾಸಿಸುತ್ತಿದ್ದ ತರವಾಡು ಮನೆಗಳ ಅವನತಿಯ ದುರಂತವನ್ನು ಹೃದಯ ವಿದ್ರಾವಕವಾದ ಶೈಲಿಯಲ್ಲಿ ಕಟ್ಟಿಕೊಟ್ಟವು.‌  ಛಿದ್ರಗೊಂಡ ಕುಟುಂಬಗಳಲ್ಲಿ ಏಕಾಕಿಯಾಗುವ ಕಥಾನಾಯಕರ ತಬ್ಬಲಿತನದ ನೋವು ಅವರ ಆರಂಭದ ಕಥೆಗಳಲ್ಲಿ ಮಡುಗಟ್ಟಿದೆ. ಗ್ರಾಮೀಣ ಜೀವನದ ಚಿತ್ರಣ, ಬಡತನದ ಬದುಕುಗಳ ನೈಜ ಚಿತ್ರಣ ಗಳು ಓದುಗನ ಮನಸ್ಸಿಗೆ ಆಪ್ತವಾಗುತ್ತವೆ. ಅಪ್ಪ ಕೆಲಸಕ್ಕಾಗಿ ಶ್ರೀಲಂಕೆಗೆ ಹೋಗಿದ್ದರಿಂದ ಮಾತೃಪ್ರಧಾನ ಕುಟುಂಬ ಪದ್ಧತಿಯಲ್ಲಿ ಆಗುವಂತೆ ಅವರು ಮಾವನ ಜತೆಗೇ ಬಾಲ್ಯದಲ್ಲಿ ಕಡುಬಡತನದ ಬದುಕನ್ನು ಕಳೆಯಬೇಕಾಯಿತು. ಮನೆಯಲ್ಲಿ ಯಾವುದಕ್ಕೂ ಹಣವಿಲ್ಲದೆ ಒದ್ದಾಡಿದ ದಿನಗಳನ್ನು ಅವರು ತಮ್ಮ ಕಥೆ ಕಾದಂಬರಿಗಳಲ್ಲಿ ಮನಕರಗುವಂತೆ ಚಿತ್ರಿಸಿದ್ದಾರೆ

ಎಂ.ಟಿ.ಯವರ ಅಪಾರವಾದ ಜನಪ್ರಿಯತೆಯ ಗುಟ್ಟು ಅವರು ಕಥನ ಶೈಲಿಯಲ್ಲಿ ಕಾಣುವ ಸರಳತೆ ಮತ್ತು ಸಹಜತೆ.  ಅವರು ತಮ್ಮ ಪ್ರಭಾವಿ ಬರವಣಿಗೆಯ ಮೂಲಕ ತಮ್ಮ ಅನುಭವದ ಕಕ್ಷೆಯೊಳಗೆ ಬಂದ ಹಾಗೂ ನೆನಪುಗಳಲ್ಲಿ ಗಾಢವಾಗಿ ನೆಲೆನಿಂತ ಪರಿಸರವನ್ನು ಮತ್ತು ಆಳವಾಗಿ ಕಾಡಿದ ವ್ಯಕ್ತಿಗಳನ್ನು ತಮ್ಮ ಸಾಹಿತ್ಯ ಕೃತಿಗಳಲ್ಲಿ ಅಮರವಾಗಿಸಿದ್ದಾರೆ.

ಚೌಕಾಕಾರದ ನಾಲ್ಕು ಸುತ್ತಿನ ಮನೆಯ  ನಡುವೆ ವಿಶಾಲವಾದ ಅಂಗಳ,  ಕತ್ತಲು ತುಂಬಿದ ಅಸಂಖ್ಯ ಚಿಕ್ಕ ಚಿಕ್ಕ ಕೋಣೆಗಳು,  ಸಾವಿರಾರು ಕಳಸಿಗೆ ಬತ್ತವನ್ನು ದಾಸ್ತಾನಿಡುತ್ತಿದ್ದ ಕಣಜದ ಮನೆ- ಎಂ.ಟಿ.ಯವರ ಮೊದಲ ಹಂತದ ಕಥೆ-ಕಾದಂಬರಿಗಳಲ್ಲಿ ಕಾಣಿಸಿಕೊಳ್ಳುವ ಮನೆಯ ಚಿತ್ರವಿದು. ಮಂತ್ರವಾದಿ ಏಕೋಮಣ್ಣ,ಕವಡೆಯಾಟದ ಕೋಂದುಣ್ಣಿ ಮಾಮ, ಕುಟುಂಬದ ಪುರೋಹಿತನಾಗಿದ್ದು ಅನಂತರ ಹುಚ್ಚನಾದ ವೇಲಾಯುಧಣ್ಣ , ವಡಕ್ಕನ್ ಪಾಟ್ಟ್ ಎಂಬ ಲಾವಣಿಯನ್ನು ಹೇಳಿಕೊಡುತ್ತಿದ್ದ ಕುಟ್ಟಿಯಣ್ಣ, ಕಿವಿಯ ಹಿಂಭಾಗದಲ್ಲಿದ್ದ ಮಾಂಸದ ಗಡ್ಡೆಯನ್ನು ಚೂರಿಯಿಂದ ಕತ್ತರಿಸಿ ತೆಗೆದ  ಮೀನಾಕ್ಷಿಯಕ್ಕ,  ಮಾವಿನ ಮರ ಹತ್ತಿ ಮಾವಿನ ಕಾಯಿಗಳನ್ನು ಕೊಯ್ದು ಕೊಡುತ್ತಿದ್ದ ಕಲ್ಯಾಣಿ- ಹೀಗೆ  ವಿಶಿಷ್ಟ ಕಥಾಪಾತ್ರಗಳನ್ನು ತಮ್ಮ  ಪರಿಸರದಲ್ಲಿ ಬಾಳಿ ಬದುಕಿದ ಎಷ್ಟೆಷ್ಟೋ ಮಂದಿ ಜೀವಂತ ವ್ಯಕ್ತಿಗಳನ್ನು , ತಮ್ಮ ಮನೆಯೊಳಗಿಂದ , ಕುಟುಂಬದ ಬಂಧು ಮಿತ್ರರೊಳಗಿಂದ  ಮತ್ತು  ಊರಿನ ಇತರ ಮನೆಗಳಿಂದ ಹೆಕ್ಕಿ  ತಮ್ಮ ಸೂಕ್ಷ್ಮವಾದ ಅಂತಃಚಕ್ಷುಗಳ ಮೂಲಕ ವೀಕ್ಷಿಸಿ  ಅವರು ಚಿತ್ರಿಸಿದ್ದಾರೆ.

ಹೊಂಡ ತೋಡಿ ನಿಧಿಯನ್ನು ಹುಗಿದಿಡಲೆಂದು  ಹೆಗಲ ಮೇಲೆ ಹಾರೆಯನ್ನಿಟ್ಟುಕೊಂಡು  ಒಂದೊಂದೇ ಕೋಣೆಯನ್ನು ಹೊಕ್ಕು ಹೊರಗೆ ಬರುತ್ತಿದ್ದ ಪೊರಯಮಾವನ ಮತ್ತು ಅಳಿಯಂದಿರ ವಿಷಪ್ರಾಶನದಿಂದ ಉಪ್ಪರಿಗೆಯಲ್ಲಿ ಹೋಗಿ ಮಲಗಿ ಸತ್ತ ತಾಶುಮಾವನ ಪ್ರೇತಗಳು, ಮನೆಗೆ ಸೇರಿದ ಹಿತ್ತಲಿನ ಪಾಳುಬಿದ್ದ  ಮನೆಯ ತಳಭಾಗದಲ್ಲಿ ತಾಂಬೂಲ ಜಗಿಯುತ್ತ ಕುಳಿತುಕೊಳ್ಳಿತ್ತಿದ್ದ  ಕುಞ್ಞತ್ತೋಲಳ ಪ್ರೇತ, ತಂಟೆ-ಚೇಷ್ಟೆಗಳನ್ನು ಮಾಡುತ್ತ  ಕುಣಿಯುವ ಕುಟ್ಡಿಚಾತ್ತ, ಮಾಣಿಕ್ಯದ ಹರಳುಗಳನ್ನು ಬಾಯಲ್ಲಿಟ್ಡುಕೊಂಡು ದಾನಪಾತ್ರೆಯನ್ನು ಕಾವಲು ಕಾಯುವ ಮಣಿನಾಗಗಳು, ಅನ್ಬನಪೂರ್ಣೇಶ್ವರಿಯಾಗಿ  ಮಾಳಿಗೆಯ ಕೋಣೆಯೊಳಗೆ  ಕುಳಿತುಕೊಂಡಿರುವ ಪರದೆವತೆ – ಹೀಗೆ ಎಷ್ಟೊಂದು ನವಿರಾದ ಸುಂದರ ಕಲ್ಪನೆಗಳು..!!ಎಂ.ಟಿಯವರ ಸಾಹಿತ್ಯ ಸುತ್ತುವುದೇ ಗ್ರಾಮೀಣ ಮಣ್ಣಿನ ಗಂಧವನ್ನು ಸೂಸುವ ಈ ಎಲ್ಲ ಪರಿಚಿತ ಚಿತ್ರಗಳ ಸುತ್ತ.

ಎಂ.ಟಿ.ಯವರ ಚಿತ್ರಕಥೆಗಳೂ ಹಾಗೆಯೇ. ಗಟ್ಟಿಯಾದ ಅಂತಸ್ಸತ್ವವುಳ್ಳ ರಚನೆಗಳು. ಅವರ ಚಲನಚಿತ್ರ ಭಾಷೆಗೆ ಪ್ರತಿ ಕಥೆಯ ವಾತಾವರಣದಲ್ಲೂ ತನ್ನದೇ ಆದ ಐತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಸ್ವತಃ ಸೃಷ್ಟಿಸುವ ಸಾಮರ್ಥ್ಯವಿರುತ್ತದೆ. ಗ್ರಾಮೀಣ ಮತ್ತು ಆಧುನಿಕ ನಗರ ಜೀವನ ಗತಿಯನ್ನು ಒಂದೇ ಛಾಯಾಚಿತ್ರದಲ್ಲಿ ಒಂದಾಗಿಸಬಲ್ಲ ಅವರ ಚಿತ್ರಕಥೆಯ ಭಾಷೆಯು ಅತ್ಯಂತ ಕಲಾತ್ಮಕವಾಗಿದ್ದು ಅನುಭವಿಸಿ ಅರ್ಥಮಾಡಿಕೊಳ್ಳಬಹುದಾದ ಸಂಪೂರ್ಣ ದೃಶ್ಯ-ಶಬ್ದ ಪಥಗಳ ಮಾಲೆಯಾಗಿದೆ. ಅವರು ನಿರ್ದೇಶಿಸಿದ ‘ನಿರ್ಮಾಲ್ಯ’ದಂಥ ಚಲನಚಿತ್ರಗಳೂ ಮಲೆಯಾಳ ಚಿತ್ರಗಳಿಗೆ ಹೊಸ ವ್ಯಾಕರಣವನ್ನೇ ಸೃಷ್ಟಿಸಿವೆ. ಅಂತೆಯೇ ಅವರ ಚಿತ್ರಗಳಿಗೆ ಮತ್ತು ಚಿತ್ರಕಥೆಗಳಿಗೆ ರಾಷ್ಟ್ರಮಟ್ಟದ ಪುರಸ್ಕಾರಗಳು ಹಲವು ಬಾರಿ ಬಂದಿವೆ.

ಗೊತ್ತಿಲ್ಲದ ಮಹಾನದಿಗಳಿಗಿಂತ ಗೊತ್ತಿರುವ ನನ್ನ ನಿಳಾನದಿಯೆಂದರೆ ನನಗಿಷ್ಟ’ ಎಂದ ಎಂ.ಟಿ.ಯವರ ಹುಟ್ಟೂರ ಬಗೆಗಿನ ಪ್ರೀತಿ ಬಹಳ ದೊಡ್ಡದು. ಅವರು ನನ್ನ ಪ್ರಿಯ ಲೇಖಕರು ಮಾತ್ರವಲ್ಲದೆ ನನಗೆ ಹಲವಾರು ವಿಷಯಗಳಲ್ಲಿ ಮಾರ್ಗದರ್ಶನ ನೀಡಿದ ಗುರುಗಳು ಕೂಡಾ. ನನ್ನ ಮೊದಲ ಅನುವಾದಿತ ಕಾದಂಬರಿ(ವೆಟ್ಟೂರು ರಾಮನ್ ನಾಯರ್ ಅವರ ‘ ಬದುಕಲು ಮರೆತ ಸ್ತ್ರೀ’ ಯನ್ನು 1999 ಆಗಸ್ಟ12ರಂದು  ತ್ರಿಶ್ಶೂರಿನ ಅಕಾಡೆಮಿ ಹಾಲ್ ನಲ್ಲಿ  ಬಿಡುಗಡೆ ಮಾಡಿದವರು ಅವರೇ  ಅಲ್ಲಿಂದ ಅರಂಭವಾದ ವಾತ್ಸಲ್ಯದ ಬಂಧವು ಗಾಢವಾಗುತ್ತಲೇ ಬಂದಿದೆ. ಸಾಹಿತ್ಯದಲ್ಲಿ ನಾನು ಏನು ಮಾಡುವುದಾದರೂ ಅವರ ಸಲಹೆಗಳನ್ನು ಕೇಳಿಯೇ ಮಾಡುತ್ತಿದ್ದೆ. ನಾನು ಭಾಷೆ-ಭಾಷೆಗಳ ನಡುವೆ ಮಾಡುವ ಅನುಸಂಧಾನದ ಬಗ್ಗೆ ಅವರು ಯಾವಾಗಲೂ ಮೆಚ್ಚುಗೆಯ ಮಾತುಗಳನ್ನಾಡಿ ಬೆನ್ನು ತಟ್ಟುತ್ತಿದ್ದರು. ಅಂಥ ಸಹೃದಯಿ ಬಂಧು ಇನ್ನಿಲ್ಲ ಎಂಬುದನ್ನು  ನಂಬಲಾಗದಿದ್ದರೂ ವಾಸ್ತವದ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಅವರಿಗೆ ಮನದಲ್ಲೇ ಶಿರಸಾ ನಮಿಸುತ್ತ  ಅವರ ಆಶೀರ್ವಾದವು ಸದಾ ನನ್ನ ಮೇಲಿರಲಿ ಎಂದು ಹೃದಯದಾಳದಿಂದ ಹಾರೈಸುತ್ತೇನೆ.

– ಡಾ.ಪಾರ್ವತಿ ಜಿ.ಐತಾಳ್

ಸಾಹಿತಿ ಹಾಗೂ ಲೇಖಕರು ಕುಂದಪುರ
      
 

 

Related Articles

error: Content is protected !!