Home » ನಾಡಿಗೆ ಬಂದಿತು ಮಕರ ಸಂಕ್ರಾಂತಿ
 

ನಾಡಿಗೆ ಬಂದಿತು ಮಕರ ಸಂಕ್ರಾಂತಿ

by Kundapur Xpress
Spread the love

ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುವುದನ್ನು ಸಂಕ್ರಾಂತಿ ಎನ್ನುತ್ತಾರೆ. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಜಗತ್ಚಕ್ಷುವಾದ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನು ಮಕರ ಸಂಕ್ರಾಂತಿಯಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಭಾರತೀಯ ಪಂಚಾಂಗದಲ್ಲಿನ ಎಲ್ಲಾ ತಿಥಿಗಳು ಚಂದ್ರನ ಚಲನೆಯನ್ನು ಆಧಾರವಾಗಿಟ್ಟುಕೊಂಡು ನಿರ್ಧರಿಸಲ್ಪಡುತ್ತದೆ. ಆದರೆ ಮಕರ ಸಂಕ್ರಾಂತಿಯನ್ನು ಸೂರ್ಯನ ಚಲನೆಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಆದ್ದರಿಂದ ಈ ಹಬ್ಬ ಪ್ರತಿವರ್ಷ ಜನವರಿ 14 ಕ್ಕೆ  ಬರುತ್ತದೆ. ಈ ಹಬ್ಬದೊಂದಿಗೆ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ. ಮಕರ ಸಂಕ್ರಾಂತಿ ಎಂದು ಪ್ರಕೃತಿ ಕೂಡ ಮಗ್ಗುಲು ಬದಲಾಯಿಸುತ್ತದೆ.

ಚಳಿ ಕಡಿಮೆಯಾಗಿ ಬೇಸಿಗೆ ಶುರುವಾಗುತ್ತದೆ. ರಾತ್ರಿ ಚಿಕ್ಕದಾಗಿ ಹಗಲು ದೊಡ್ಡದಾಗುವುದನ್ನು, ಅಂಧಕಾರ ಕಡಿಮೆಯಾಗಿ ಪ್ರಕಾಶ ಜಾಸ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅರ್ಥಾತ್ ಮಕರ ಸಂಕ್ರಾಂತಿಯಂದು ಸೂರ್ಯನ ರಾಶಿಯಲ್ಲಿ ಆಗುವ ಪರಿವರ್ತನೆಯನ್ನು ಅಂಧಕಾರದಿಂದ ಪ್ರಕಾಶದ ಕಡೆ ಅಗ್ರಸರನಾಗುವುದು ಎಂದು ತಿಳಿಯಲಾಗುತ್ತದೆ. ಪ್ರಕಾಶ ಜಾಸ್ತಿಯಾಗುವುದರಿಂದ ಪ್ರಾಣಿಗಳಲ್ಲಿ ಚೇತನ ಶಕ್ತಿ ಮತ್ತು ಕಾರ್ಯಶಕ್ತಿ ವೃದ್ಧಿಯಾಗುತ್ತದೆ. ಅದಕ್ಕಾಗಿ ಸೂರ್ಯದೇವನ ಆರಾಧನೆ ಮತ್ತು ಪೂಜೆ ಮಾಡಿ ಸೂರ್ಯ ದೇವನಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ.

ನಮ್ಮೆಲ್ಲಾ ಚಟುವಟಿಕೆಗಳಿಗೆ ಸೂರ್ಯನೇ ಆಧಾರವಾದುದರಿಂದ, ಉತ್ತಮ ಬೆಳೆಯನ್ನು ನೀಡುವುದಕ್ಕಾಗಿ ಸೂರ್ಯದೇವನಿಗೆ ಧನ್ಯವಾದ ಸಮರ್ಪಿಸಲು, ಸೂರ್ಯನನ್ನು ಈ ದಿನ ವಿಶೇಷವಾಗಿ ಪೂಜಿಸುತ್ತಾರೆ. ಈ ದಿನ ವಿಶೇಷವಾಗಿ ಪಂಚದೇವತೆಗಳಾದ ಗಣೇಶ, ಶಿವ, ವಿಷ್ಣು, ಮಹಾಲಕ್ಷ್ಮಿ ಮತ್ತು ಸೂರ್ಯನ ಪೂಜೆ ಮಾಡುವುದರಿಂದ ತಮ್ಮ ಭಾಗ್ಯ ಬದಲಿಸಿಕೊಳ್ಳಬಹುದು ಎಂಬ ವಾಡಿಕೆ ಇದೆ . ವಸ್ತ್ರ, ಧನ, ಕಂಬಳಿ ,ಎಳ್ಳು ಅಥವಾ ಎಳ್ಳಿನ ಸಿಹಿ ತಿನಿಸುಗಳು ಇತ್ಯಾದಿಗಳನ್ನು ದಾನ ಮಾಡುವುದರಿಂದ ಶನಿಗೆ ಸಂಬಂಧಿಸಿದ ಕಷ್ಟಗಳು ಮತ್ತು ದೋಷಗಳು ಕಳೆದುಹೋಗುವುದು ಎಂದು ಹೇಳುತ್ತಾರೆ.

ಈ ದಿನ ಹಿರಿಯರಿಗೆ ನಮಸ್ಕರಿಸಿ ಎಳ್ಳು ವಸ್ತ್ರ ಧನ ಇತ್ಯಾದಿ ದಾನ ಮಾಡುವುದರಿಂದ ಸೂರ್ಯದೇವನು ಪ್ರಸನ್ನನಾಗುವನು ಎಂದು ಶಾಸ್ತ್ರಗಳಲ್ಲಿ ವರ್ಣನೆ ಇದೆ ಈ ದಿನ ದನಕರು, ಎತ್ತುಗಳ ಕೊಂಬುಗಳನ್ನು ಸ್ವಚ್ಛ ಮಾಡಿ ಬಣ್ಣ ಬಳಿದು ಶೃಂಗರಿಸಿ ಅವುಗಳ ಮೆರವಣಿಗೆ ಮಾಡಲಾಗುತ್ತದೆ. ಅವುಗಳಿಗೂ ಎಳ್ಳು ,ಬೆಲ್ಲ, ಕಬ್ಬು ,ವಿಶೇಷ ತಿಂಡಿ ತಿನಿಸುಗಳನ್ನು ತಿನ್ನಿಸಿ, ವರ್ಷವಿಡಿ ನಮಗಾಗಿ ದುಡಿದ ಈ ಮೂಕ ಪ್ರಾಣಿಗಳಿಗೆ ಪೂಜಿಸಿ ಕೃತಜ್ಞತೆ ಸಲ್ಲಿಸಲಾಗುತ್ತದೆ. ಭಗೀರಥನ ತಪಸ್ಸಿಗೆ ಮೆಚ್ಚಿದ ಗಂಗೆ ಧರೆಗಿಳಿದು ಕಪಿಲಮುನಿ ಆಶ್ರಮದ ಮಾರ್ಗವಾಗಿ ಸಾಗರವನ್ನು ಇದೇ ಸಂಕ್ರಾಂತಿಯ ದಿನದಂದು ಸೇರಿದಳು. ಹಾಗಾಗಿ, ಈ ದಿನ ಗಂಗಾ ಸ್ನಾನಕ್ಕೆ ಬಹಳ ಪ್ರಾಶಸ್ತ್ಯ ಕೊಡಲಾಗಿದೆ.

ಉತ್ತರಾಯಣದಲ್ಲಿ ದೇಹ ತ್ಯಾಗ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುವುದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇದೇ ಕಾರಣಕ್ಕೆ ಮಹಾಭಾರತದ ಯುದ್ಧದ 10ನೇ ದಿನ ಅರ್ಜುನನ ಬಾಣಗಳಿಂದ ಶರಶಯ್ಯೆಯಲ್ಲಿ ಮಲಗಿದ ಭೀಷ್ಮ ಪಿತಾಮಹರು ಇಚ್ಛಾ ಮರಣದ ವರ ಪಡೆದಿದ್ದರಿಂದ ದೇಹ ತ್ಯಾಗ ಮಾಡಲು ಉತ್ತರಾಯಣ ಬರುವವರೆಗೂ ಕಾದು, ಸಂಕ್ರಾಂತಿಯಂದೇ ದೇಹತ್ಯಾಗ ಮಾಡುತ್ತಾರೆ.ಸಂಕ್ರಾಂತಿಯಂದು ಗಾಳಿಪಟ ಹಾರಿಸುವ ಸಂಪ್ರದಾಯ ಇದೆ.ಎಳ್ಳು ಬೆಲ್ಲ ಶೀತವಾತದಿಂದ ಉಂಟಾಗುವ ಜಡ್ಡು ಆಲಸ್ಯಗಳನ್ನು ದೂರಮಾಡುವುದು ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ ಈ ಹಬ್ಬದ ವೈಶಿಷ್ಟ್ಯ ಈ ಪುಣ್ಯಕಾಲದಂದು ಮಾಡಿದ ದಾನ ಧರ್ಮಗಳು ಜನ್ಮ ಜನ್ಮದಲ್ಲೂ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ.

ಸರ್ವರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

ಸ್ವರ್ಣಾ ಕುಂದಾಪುರ

   

Related Articles

error: Content is protected !!