Home » ಸತಿಸಹಗಮನ ಪದ್ಧತಿಯನ್ನು ಕಿತ್ತೊಗೆದ ಕಾಲಪುರುಷ ರಾಜಾ ರಾಮ್‍ ಮೋಹನ್ ರಾಯ್..
 

ಸತಿಸಹಗಮನ ಪದ್ಧತಿಯನ್ನು ಕಿತ್ತೊಗೆದ ಕಾಲಪುರುಷ ರಾಜಾ ರಾಮ್‍ ಮೋಹನ್ ರಾಯ್..

by Kundapur Xpress
Spread the love

ಮೇ 22. ರಾಜಾ ರಾಮ್ ಮೋಹನರಾಯ್ ರ ಹುಟ್ಟಿದ ದಿನ. ಅವರು ಮುಖ್ಯವಾಗಿ ಸತಿಸಹಗಮನ ಪದ್ಧತಿಯನ್ನು ಅಂದರೆ ಪತಿಯ ಚಿತೆಯಲ್ಲಿ ಸತಿಯೂ ಹಾರಿ ಪ್ರಾಣ ಬಿಡುವ ಅನಿಷ್ಟ ಸಾಂಪ್ರದಾಯಿಕ ಪದ್ಧತಿಯನ್ನು ಬುಡ ಸಮೇತ ಕಿತ್ತೊಗೆದ ಮೂಲ ಪುರುಷ. ಈ ಮಹಾ ಪುರುಷನ ಹುಟ್ಟಿದ ದಿನ ಮೇ 22. ಇವರ ನೆನೆದು ಒಂದೆರಡು ಮಾತು…
ಚಿತಾಗ್ನಿಯು ತನ್ನ ಕೆನ್ನಾಲಗೆಯನ್ನು ಮಾರುದ್ದ ಚಾಚುತ್ತಿತ್ತು. ಸಜೀವಿಯನ್ನೇ ದಹಿಸಲು ಕಾತರಗೊಂಡಿತ್ತು. ಅಲೋಕಮಂಜರಿ ತನ್ನ ಪತಿಯ ಮರಣದಿಂದ ಅರ್ಧ ಕುಸಿದಿದ್ದಳು. ಜೀವನವೆ ವ್ಯರ್ಥ ಎಂದು ಪತಿಯ ಹಾದಿ ಹಿಡಿಯ ಹೊರಟಿದ್ದಳು. ಇನ್ನೇನು ಚಿತೆಗೆ ಹಾರಬೇಕೆನ್ನುವಷ್ಟರಲ್ಲಿ ಪತಿಯ ಸೋದರ ಅವಳನ್ನು ತಡೆಯುತ್ತಾನೆ…
“ಬೇಡ ತಾಯಿ, ಮೂರ್ಖತನದ ಕೆಲಸ ಬೇಡ. ನಿನ್ನ ಬಾಳನ್ನು ಬೆಂಕಿಗೆ ಆಹುತಿ ನೀಡಬೇಡ. ಈ ತ್ಯಾಗದಿಂದ ಅಣ್ಣನ ಆತ್ಮಕ್ಕೆ ಎಳ್ಳಷ್ಟು ಶಾಂತಿ ಸಿಗದು,” ಎಂದು ಗೋಗರೆಯುತ್ತಾನೆ. ಅವಳು ವಾಸ್ತವ ಲೋಕಕ್ಕೆ ಬರುತ್ತಾಳೆ. ಆ ಮಾತುಗಳಿಂದ ದ್ವಂದ್ವಕ್ಕೆ ಸಿಲುಕುತ್ತಾಳೆ. ತನ್ನ ಮುಂದಿದ್ದ ಬೆಂಕಿಯ ಭೀಕರ ಘರ್ಜನೆಯಿಂದ ಅಧೀರಗೊಂಡು ಒಂದು ಹೆಜ್ಜೆ ಹಿಂದಿಡುತ್ತಾಳೆ…
ಅಲ್ಲಿ ನೆರೆದಿದ್ದ ಪುರೋಹಿತರು, ಸಂಪ್ರದಾಯವಾದಿಗಳು ಆತನನ್ನು ವಿರೋಧಿಸಿ ದೂರಕ್ಕೆ ದೂಡುತ್ತಾರೆ. ಅಲೋಕಮಂಜರಿಗೆ ಬೆಂಕಿಗೆ ಬೀಳಲು ಪ್ರೋತ್ಸಾಹಿಸುತ್ತಾರೆ. “ಪತಿ ಇಲ್ಲದ ಮೇಲೆ ವಿಧವೆಯ ಬಾಳು ಹೀನಾಯವಾದದ್ದು. ನೀನು ಸಾಯುವುದೇ ಧರ್ಮ. ಪತಿಯ ಜೊತೆ ಹೋಗಿ ಸ್ವರ್ಗವನ್ನು ಸೇರಿ ಅಲ್ಲಿಯೂ ಆತನನ್ನು ಸೇವೆ ಮಾಡುವುದೇ ಅವಳಿಗೆ ಒಳಿತು” ಎಂದು ಆಕೆಯನ್ನು ಬಲವಂತವಾಗಿ ಆಕೆಗೆ ಇನ್ನೇನೂ ಯೋಚಿಸಲು ಸಮಯ ನೀಡದೆ ಬೆಂಕಿಗೆ ತಳ್ಳುತ್ತಾರೆ. ಆಕೆ ಸಹಿಸಲಸಾಧ್ಯ ನೋವಿನಿಂದ ಸಹಾಯಕ್ಕಾಗಿ ಕೂಗುತ್ತಾಳೆ. ‘ಕಾಪಾಡಿ’ ಎಂದು ಚೀತ್ಕರಿಸುತ್ತಾಳೆ. ಅವರೆಲ್ಲಾ ಕಿವಿ ಕೇಳದವರಂತೆ, ಕಣ್ಣು ಕಾಣದವರಂತೆ ನಟಿಸುತ್ತಾರೆ. ತಕ್ಷಣವೇ ಜಯಕಾರ ಘೋಷಗಳು, ತಮಟೆಯ ಸದ್ದು ಆಕೆಯ ಚೀತ್ಕಾರವನ್ನು ಮುಚ್ಚಿಹಾಕುತ್ತವೆ. ಎಲ್ಲರೂ ಆಕೆಯ ತ್ಯಾಗವನ್ನು ಹೊಗಳುತ್ತಾರೆ, ನಾಟಕೀಯ ಕನಿಕರವನ್ನು ತೋರುತ್ತಾರೆ. ಆಕೆ ತೊಳಲಾಡಿದಷ್ಟೂ ಬೆಂಕಿಯಲ್ಲಿ ಕಾದು ಕೆಂಪಗಾದ ಬಿದಿರು ಬೊಂಬುಗಳು ಆಕೆಯನ್ನು ತಿವಿದು, ತನ್ನೊಳಗೆ ಎಳೆದುಕೊಂಡು ಸಮಾಧಿ ಮಾಡುತ್ತದೆ. ಅಲ್ಲಿ ನೆರೆದವರೆಲ್ಲಾ ಆಕೆಯನ್ನು ಸ್ತುತಿಸುತ್ತಾ ಮನೆಗೆ ತೆರಳುತ್ತಾರೆ…
ಆದರೆ ಕಣ್ಮುಂದೆಯೇ ನಡೆದ ಈ ಘೋರ ಕೃತ್ಯ ಆ ಯುವಕನಲ್ಲಿ ತೀವ್ರ ಪರಿಣಾಮವನ್ನುಂಟು ಮಾಡುತ್ತದೆ. ಮನುಷ್ಯ ಸಮಾಜಕ್ಕೆ ಕಳಂಕಪ್ರಾಯವಾದ ಈ ಕ್ರೂರ ಸತಿಪದ್ಧತಿಯನ್ನು ಬುಡಸಮೇತ ಕಿತ್ತೊಗೆಯುವ ನಿರ್ಧಾರವನ್ನು ಅಂದೇ ಕೈಗೊಳ್ಳುತ್ತಾನೆ. ಆತನೇ ಮುಂದೆ ಭಾರತದ ನವೋದಯದ ಧೃವತಾರೆ ಎಂಬ ಬಿರುದನ್ನು ಪಡೆಯುತ್ತಾರೆ…

 

Version 1.0.0

ಆತ ರಾಜಾರಾಮ್ ಮೋಹನ್ ರಾಯ್
1774 ರ ಮೇ 22 ರಂದು ಬಂಗಾಳದ ರಾಧಾನಗರದಲ್ಲಿ ಜನಿಸಿದ ರಾಜಾರಾಮ್ ಮೋಹನ್ ರಾಯ್ ರವರ ತಂದೆ ರಮಾಕಾಂತ್ ರಾಯ್ ಮತ್ತು ತಾಯಿ ತಾರಿಣೀದೇವಿ. ಇವರದ್ದು ಅತ್ಯಂತ ಸಂಪ್ರದಾಯಸ್ಥ ಕುಟುಂಬ. ಸುಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಬೆಳೆದ ಇವರು ತಮ್ಮ ಬಾಲ್ಯ ಶಿಕ್ಷಣವನ್ನು ಹಳ್ಳಿಯಲ್ಲೇ ಪಡೆದು, 9 ನೇ ವಯಸ್ಸಿನಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಪಾಟ್ನಾಗೆ ತೆರಳಿದರು. ಅಲ್ಲಿ ಪರ್ಶಿಯನ್ ಮತ್ತು ಅರೆಬಿಕ್ ಭಾಷೆ ಕಲಿತರು. ಮೌಲ್ವಿಗಳ ಪರಿಚಯವಾಗಿ ಇಸ್ಲಾಂ ಧರ್ಮದ ಕೆಲವು ಉತ್ತಮ ಅಂಶಗಳಿಂದ ಆಕರ್ಷಿತರಾದರು. ಏಕದೇವೋಪಾಸನೆ ಮತ್ತು ದೇವರು ನಿರಾಕಾರ ಸ್ವರೂಪಿ ಎಂಬ ವಿಚಾರಗಳು ಅವರಿಗೆ ತುಂಬಾ ಹಿಡಿಸಿತು…
ವ್ಯಾಸಂಗ ಮುಗಿಸಿ ಮನೆಗೆ ಮರಳಿದ ಮೇಲೆ ಅವರು ಮನೆಯಲ್ಲಿ ನಡೆಯುತ್ತಿದ್ದ ಅರ್ಥರಹಿತ ಆಚರಣೆಗಳನ್ನು ಪ್ರಶ್ನಿಸತೊಡಗಿದರು. ಇದರಿಂದ ತಂದೆ ಮಗನಲ್ಲಿ ವೈಮನಸ್ಯವುಂಟಾಗಿ ಅವರು ಮನೆಯನ್ನು ತ್ಯಜಿಸಬೇಕಾಯಿತು. ಅವರು ಬೌದ್ಧ ಧರ್ಮದ ಬಗ್ಗೆ ತಿಳಿಯಲು ಟಿಬೆಟ್ ಗೆ ತೆರಳಿದರು. ಲಾಮಾಗಳು ಅನುಸರಿಸುತ್ತಿದ್ದ ಮೂಢ ಪದ್ಧತಿಗಳನ್ನು ಕುರುಡು ಸಂಪ್ರದಾಯಗಳನ್ನು, ದೇವಾಲಯಗಳಲ್ಲಿ ನಡೆಯುತ್ತಿದ್ದ ಧರ್ಮದ ಹೆಸರಿನ ದಂಧೆಗಳನ್ನು ಟೀಕಿಸಿದರು. ಇದರಿಂದ ಕೆರಳಿದ ಲಾಮಾಗಳು ಅವರ ಪ್ರಾಣಕ್ಕೆ ಕುತ್ತು ತರಲು ಪ್ರಯತ್ನಿಸಿದಾಗ ಅಲ್ಲಿನ ಕೆಲವು ಸಹೃದಯ ಮಹಿಳೆಯರ ಸಹಾಯದಿಂದ ತಪ್ಪಿಸಿಕೊಂಡು ಬಂದರು. ಇದರಿಂದ ಅವರಿಗೆ ಮಹಿಳೆಯರ ಮೇಲಿನ ಗೌರವ ಭಾವನೆ ಮತ್ತಷ್ಟು ಹೆಚ್ಚಾಯಿತು…
ಹಿಂತಿರುಗಿದ ಮೇಲೆ ಹಿಂದೂ ಧರ್ಮದ ಮೂಲ ಅರಿಯಲು ವೇದ ಉಪನಿಷತ್ ಗಳ ಆಳ ಅಧ್ಯಯನದಲ್ಲಿ ತೊಡಗಿದರು. ಮೂಲಧರ್ಮಕ್ಕೂ ಪ್ರಸ್ತುತ ಆಚರಣೆಗಳಿಗೂ ಇರುವ ಅಜಗಜಾಂತರ ವ್ಯತ್ಯಾಸವನ್ನು ಗ್ರಹಿಸಿದರು. ತಮ್ಮ ಭಾಷಾ ಜ್ಞಾನವನ್ನು ಬಳಸಿಕೊಂಡು ವೇದಗಳನ್ನು ಬಂಗಾಳಿಗೆ ಅನುವಾದಿಸಿದರು, ಜನರಲ್ಲಿ ಆ ಬಗ್ಗೆ ಅರಿವು ಮೂಡಿಸಲು ಯತ್ನಿಸಿದರು. ಚರ್ಚೆ, ಸಂವಾದಗಳ ಮೂಲಕ ಜಾಗೃತಿ ಮೂಡಿಸಲೆತ್ನಿಸಿದರು. ಉತ್ತಮ ಇಂಗ್ಲಿಷ್ ಜ್ಞಾನವನ್ನು ಹೊಂದಿದ್ದ ಇವರು ಪಾಶ್ಚಿಮಾತ್ಯ ವಿಚಾರಧಾರೆ, ಅಲ್ಲಿನ ಶಿಕ್ಷಣ ಪದ್ಧತಿ, ಕ್ರಾಂತಿಕಾರಿ ಹೋರಾಟಗಳು, ವಿಜ್ಞಾನ, ಪತ್ರಿಕಾ ಸ್ವಾತಂತ್ರ್ಯ ಇತ್ಯಾದಿ ಉನ್ನತ ವಿಚಾರಗಳಿಂದ ಪ್ರಭಾವಿತರಾದರು…
ತಮ್ಮ ಕುಟುಂಬದಲ್ಲಾದ ಸತಿ ಪದ್ಧತಿಯ ಅನುಸರಣೆಯಿಂದ ನೊಂದ ಇವರು ಈ ಕೆಟ್ಟ ಪದ್ಧತಿಯ ಜೊತೆಗೆ ಇತರ ಪಿಡುಗುಗಳಾದ ಬಹುಪತ್ನಿತ್ವ, ಬಾಲ್ಯವಿವಾಹ, ಸ್ತ್ರೀ ಭ್ರೂಣ ಹತ್ಯೆ, ಜಾತಿಪದ್ಧತಿ ಇತ್ಯಾದಿಗಳ ವಿರುದ್ಧ ಟೊಂಕ ಕಟ್ಟಿ ನಿಂತರು. ಬ್ರಹ್ಮ ಸಮಾಜವನ್ನು ಸ್ಥಾಪಿಸಿ ಅದನ್ನು ಸಾಮಾಜಿಕ ಸಮಸ್ಯೆಗಳನ್ನು ನಿರ್ಮೂಲನಗೊಳಿಸುವ ಅಸ್ತ್ರವನ್ನಾಗಿ ಬಳಸಿದರು. ಪತ್ರಿಕೆಗಳಲ್ಲಿ ತಮ್ಮ ಶಕ್ತಿಯುತ ಲೇಖನಗಳ ಮೂಲಕ ಸತಿ ಪದ್ಧತಿಯ ವಿರುದ್ಧ ಟೀಕಾಪ್ರಹಾರ ಮಾಡಿದರು…
1928 ರಲ್ಲಿ ಕಲ್ಕತ್ತಾದಲ್ಲಿ 309 ವಿಧವೆಯರನ್ನು ಸಜೀವ ದಹಿಸಲಾಗಿತ್ತೆಂಬ ವಿಷಯವನ್ನು ಪ್ರಕಟಿಸಿದರು. ಸರ್ಕಾರಕ್ಕೆ ಅರ್ಜಿಯ ಮೇಲೆ ಅರ್ಜಿಯನ್ನು ಸಲ್ಲಿಸಿ ಸತಿ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಪಡಿಸಿದರು. ಇದರಿಂದ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು. ಜೀವ ಬೆದರಿಕೆಯನ್ನು ಲೆಕ್ಕಿಸದೆ ಜನರ ಬಳಿ ಸಹಿ ಸಂಗ್ರಹಿಸಿ ಸರ್ಕಾರದ ಮೇಲೆ ಒತ್ತಡ ತಂದರು. ಹಿಂದೂ ಧರ್ಮದಲ್ಲೆಲ್ಲೂ ಸತಿ ಪದ್ಧತಿಯ ಸಮರ್ಥನೆ ಇಲ್ಲವೆಂದು ಪ್ರತಿಪಾದಿಸಿದರು. ಅದಕ್ಕಾಗಿ ಹಣ, ಆರೋಗ್ಯ ಎಲ್ಲವನ್ನೂ ತ್ಯಾಗ ಮಾಡಿದರು. ಆ ಕೆಲಸಕ್ಕಾಗಿಯೇ ಇಂಗ್ಲೆಂಡ್‍ಗೂ ಹೋದರು. ಕೊನೆಗೂ ಇವರ ಒತ್ತಡಕ್ಕೆ ಮಣಿದ ಬ್ರಿಟಿಷ್ ಸರ್ಕಾರ 1929 ರಲ್ಲಿ ಸತಿ ಪದ್ಧತಿಯನ್ನು ನಿಷೇಧಿಸಿ ಕಾನೂನನ್ನು ಜಾರಿಗೊಳಿಸಿತು. ಆ ಕಾನೂನು ಎಷ್ಟು ಕಟುವಾಗಿತ್ತೆಂದರೆ ಸತಿ ಪದ್ಧತಿ ಕೆಲವೇ ತಿಂಗಳುಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಯಿತು, ಅಲ್ಲೊಂದು ಇಲ್ಲೊಂದು ಘಟನೆಗಳನ್ನು ಹೊರತುಪಡಿಸಿ…
19 ನೇ ಶತಮಾನದ ಭಾರತದ ಸುಧಾರಣಾ ಚಳುವಳಿಯ ಪ್ರವರ್ತಕರೆನಿಸಿಕೊಂಡಿರುವ ರಾಮ್‍ಮೋಹನ್ ರಾಯ್‍ರವರು ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು. ಹಳೆಯ ಸಾಂಪ್ರದಾಯಿಕ ಶಿಕ್ಷಣವನ್ನು ವಿರೋಧಿಸಿ ಪ್ರಗತಿಪರ ವಿಚಾರಧಾರೆಯುಳ್ಳ ವೈಜ್ಞಾನಿಕ ಶಿಕ್ಷಣ ಎಲ್ಲರಿಗೂ ದೊರೆಯಬೇಕೆಂದು ಪ್ರತಿಪಾದಿಸಿದರು. ಬಹುಪತ್ನಿತ್ವ ಮತ್ತು ಬಾಲ್ಯವಿವಾಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಒಟ್ಟಾರೆ ಮಹಿಳೆಯರ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿದರು. ಏಕೆಂದರೆ ಸಮಾಜದ ಅರ್ಧ ಭಾಗವನ್ನು ಕತ್ತಲೆಯಲ್ಲಿಟ್ಟು, ಸಮಾಜ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲವೆಂಬುದು ಅವರ ದೃಢ ಅಭಿಪ್ರಾಯವಾಗಿತ್ತು…
1833 ರಲ್ಲಿ ಲಂಡನ್‍ನ ಬ್ರಿಸ್ಟಲ್‍ನಲ್ಲಿ ತಮ್ಮ ಕೊನೆಯುಸಿರೆಳೆದರು. ಹೆಣ್ಣುಮಕ್ಕಳ ಉದ್ಧಾರಕ್ಕಾಗಿ ಶ್ರಮಿಸಿದ ಮಹನೀಯರ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ರಾಮ್ ಮೋಹನ್ ರಾಯರವರು ತಮ್ಮ ಸಮಸ್ಯೆಗಳ ವಿರುದ್ಧ ಹೋರಾಡುತ್ತಿರುವ ಮಹಿಳೆಯರಿಗೆ ಎಂದಿಗೂ ದಾರಿದೀಪಕರಾಗಿ ಉಳಿಯುತ್ತಾರೆ…
ಇಂತಹ ಮಹಾನ್ ಚೇತನ ನಮ್ಮ ಸಮಾಜ ಸುಧಾರಣೆಗಾಗಿ ಮತ್ತೆ ಮತ್ತೆ ಹುಟ್ಟಿ ಬರಲಿ ಎಂದು ಆಶಿಸುತ್ತೇನೆ.

ಸ್ವರ್ಣಾ ಕುಂದಾಪುರ

 

Related Articles

error: Content is protected !!