Home » “ರಂಗೋಲಿ” ನಿಮಗೆಷ್ಟು ಗೊತ್ತು?
 

“ರಂಗೋಲಿ” ನಿಮಗೆಷ್ಟು ಗೊತ್ತು?

by Kundapur Xpress
Spread the love

ರಂಗವಲ್ಲಿಯ ಇತಿಹಾಸ ಮಾನವನ ಇತಿಹಾಸದಷ್ಟೇ ಪ್ರಾಚೀನಾದುದು.ರಂಗವಲ್ಲಿ ಎಂದರೆ ಬಣ್ಣಗಳಿಂದ ಅಲಂಕರಿಸಿದ ಲತೆಗಳು ಎಂದರ್ಥವಿದೆ. ರಂಗಾವಳಿ ಎಂದರೆ ಬಣ್ಣಗಳ ಸಮೂಹ. ರಂಗ ಎಂದರೆ ಕೃಷ್ಣ ಒಲಿ ಎಂದರೆ ಅನುಗ್ರಹಿಸು ಎಂದೂ ಅರ್ಥವಿದೆ. ಭಗವಂತನ ಅನುಗ್ರಹಕ್ಕಾಗಿ ರೂಪತಳೆದ ಕಲೆಯೇ ರಂಗವಲ್ಲಿ ರಂಗೋಲಿ  ಒಂದು ಜಾನಪದ ಕಲೆ. ಅರವತ್ತನಾಲ್ಕು ಕಲೆಗಳಲ್ಲಿ  ಪ್ರಧಾನವಾದ ಚಿತ್ರಕಲೆಯ ಒಂದು ಭಾಗವೇ ರಂಗವಲ್ಲಿ. ಇದು ಚಿತ್ರಕಲೆಯ ಬಿಂದುಜ ಎಂಬ ವಿಭಾಗಕ್ಕೆ ಸೇರಿದೆ.

ಅನೇಕ ಸಂಸ್ಕೃತ ಕಾವ್ಯಗಳಲ್ಲಿ ವಿವಿಧ ರಿತಿಯ ರಂಗವಲ್ಲಿಯ ವಿವರಣೆಗಳಿವೆ. ಕನ್ನಡದ `ಬಸವಪುರಾಣದಲ್ಲಿ ರಂಗವಲ್ಲಿಯ ಕುರಿತು `ವೃಕ್ಷಂ ಲತೆ ಸ್ವಸ್ತಿಕಂ ಪದ್ಮರೇಖೆ ಗೃಹಲಕ್ಷಣಮೆನಿಪ್ಪ ಬಂಧಂ ರಂಗವಲ್ಲಿಯಕ್ಕು ಎಂದು ಹೇಳಿದೆ. ರಂಗವಲ್ಲಿಯನ್ನು ಮನೆಗೆ ಏಳಿಗೆಯ ಸೂಚ್ಯವಾಗಿ ಬಳಸುತ್ತಾರಂತೆ.ಅಂದರೆ ಹಿಂದಿನ ಕಾಲದಲ್ಲಿ ತಮ್ಮ ಎಳಿಗೆಯನ್ನು ಜನರ ಜೊತೆಗಲ್ಲದೇ ಸಣ್ಣಪುಟ್ಟ ಹಕ್ಕಿ-ಕೀಟ-ಇರುವೆಗಳಂತಹ ಜೀವಿಗಳ ಜೊತೆಯೂ ಹಂಚಿಕೊಳ್ಳಲು ಬಯಸಿ ರಂಗವಲ್ಲಿ ಬಿಡಿಸುತ್ತಿದ್ದರಂತೆ.ಆ ರಂಗವಲ್ಲಿಯ ಸೊಬಗು ಜನರ ಮನಸ್ಸನ್ನು ಸೆಳೆದರೆ,ರಂಗವಲ್ಲಿಗೆ ಬಳಸುವ ಅಕ್ಕಿಹಿಟ್ಟು,ಹೂವು-ಕಾಳುಗಳು ಮೂಕಜೀವಿಗಳಿಗೆ ಆಹಾರವಾಗುತ್ತಿತ್ತಂತೆ.

ರಂಗವಲ್ಲಿಯ ಕೆಳಗೆ ದೇವತೆಗಳು ವಾಸಿಸುತ್ತಾರೆಂದೂ ಅವರು ದುಷ್ಟಶಕ್ತಿಯಿಂದ ಕಾಪಾಡುತ್ತಾರೆಂದೂ ನಂಬಿಕೆಯಿತ್ತಂತೆ. ಭೂದೇವಿಯ ಸ್ವರೂಪಳಾಗಿರುವ ಭೂಮಿಯನ್ನು ಸಂಸ್ಕಾರ ಪೂರಕವಾಗಿ ಸಾರಿಸಿ,ಭಕ್ತಿ ಭಾವನೆಯಿಂದ ರಂಗವಲ್ಲಿ ರಚಿಸಿದರೆ,ಇದರಲ್ಲಿ ಆಹ್ವಾನಿತರಾದ ದೇವತೆಗಳು ಸದಾಕಾಲ ಮನೆಯಲ್ಲಿ ವಾಸವಾಗಿರುತ್ತಾರೆ,ರಂಗವಲ್ಲಿಯ ಮೇಲಿಡುವ ಅರಿಶಿನವನ್ನು ಲಕ್ಶ್ಮೀಗೆಂದೂ,ಕಂಕುಮವು ಗೌರಿಗೆಂದೂ ಪರಿಗಣಿಸುತ್ತಾರೆ ವೈಚಾರಿಕವಾಗಿ ಹೇಳುವುದಾದರೆ ಪರಿಸರವನ್ನು ಸುಂದರವಾಗಿ, ಸ್ವಚ್ಛವಾಗಿಡುವುದೇ ಪ್ರಧಾನವಾದ ಉದ್ದೇಶವಾದರೆ ಸಂಪ್ರದಾಯ, ಆಚರಣೆಗಳ ಅನುಸರಣೆ ರಂಗವಲ್ಲಿ ಹಾಕುವುದರ ಮತ್ತೊಂದು ಉದ್ದೇಶ.

ಭಾರತೀಯ ಸಂಪ್ರದಾಯದಲ್ಲಿ ಬಣ್ಣಗಳು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ, ಇದು ಅಲಂಕಾರಿಕ ಅಥವಾ ಧಾರ್ಮಿಕ ಮಟ್ಟದಲ್ಲಿ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಪ್ರಯೋಜನಕಾರಿಯಾಗಿದೆ. ಬಣ್ಣಗಳು ವಿಶೇಷವಾಗಿ ಮಾನಸಿಕ ಆರೋಗ್ಯಕ್ಕೆ ಉತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಮನೆಯ ಮುಂದಿನ ರಂಗೋಲಿ ಸೌಭಾಗ್ಯದ ಆಗಮನದ ಸಂಕೇತವಾಗಿದ್ದು ನಕಾರಾತ್ಮಕತೆಯನ್ನು ದೂರವಿರಿಸಿ ಸಾಕಾರಾತ್ಮಕತೆಯನ್ನು ವೃದ್ಧಿಸುತ್ತದೆ. ಮನಸ್ಸಿನ ಒತ್ತಡವನ್ನು ನಿವಾರಿಸಿ ಮನೆಗೆ ಬರುವವರಿಗೂ ಆಹ್ಲಾದವನ್ನು ನೀಡುತ್ತದೆ. ರಂಗೋಲಿಯನ್ನು ಹಾಕಲು ಬಳಸುವ ತೋರ್ಬೆರಳು ಮತ್ತು ಹೆಬ್ಬೆರಳಿನಿಂದ ಉಂಟಾಗುವ ಜ್ಞಾನಮುದ್ರೆಯಿಂದ ಮಸ್ತಿಷ್ಕ ಸಕ್ರಿಯವಾಗಿ ಬೌದ್ಧಿಕ ವಿಕಾಸವಾಗುವುದು. ಎರಡೂ ಬೆರಳುಗಳ ಆಕ್ಯೂಪ್ರೆಷರ್ನಿಂದಾಗಿ ಅಧಿಕ ರಕ್ತದೊತ್ತಡ ನಿವಾರಣೆಯಾಗಿ ಮಾನಸಿಕ ಮತ್ತು ಆತ್ಮಿಕ ಶಾಂತಿ ಲಭಿಸುವುದು.

ರಂಗೋಲಿ ಜೀವನದ ತತ್ವಶಾಸ್ತ್ರವನ್ನು ಬೋಧಿಸುತ್ತದೆ. ನಶ್ವರ ಎಂದು ತಿಳಿದಿದ್ದರೂ ವರ್ತಮಾನವನ್ನು ಪೂರ್ಣ ಉತ್ಸಾಹದಿಂದ ಬದುಕುವ ಬಯಕೆ ಮತ್ತು ಶ್ರದ್ದೆ ನಿರಂತರವಾಗಿರುಬೇಕೆಂದೂ, ನಾಳೆ ತೊಳೆದು ಹೋಗುವೆನೆಂದು ತಿಳಿದಿದ್ದರೂ ಯಾವ ಉದ್ದೇಶಕ್ಕಾಗಿ ಹಾಕಿದ್ದರೋ ಆ ಉದ್ದೇಶವನ್ನು ನೆರವೇರಿಸುವುದೇ ಮುಖ್ಯ ಕರ್ತವ್ಯ ಎಂದು ತೋರಿಸುತ್ತದೆ. ನಮ್ಮ ಸಾಂಸ್ಕೃತಿಕ ಭಾವನೆಗಳನ್ನು ಸಾಕಾರಗೊಳಿಸುವ ರಂಗೋಲಿ ವರ್ಣರಂಜಿತ ಅಭಿವ್ಯಕ್ತಿಯಾಗಿದೆ ಸನಿಹದಲ್ಲಿರುವ ದೀಪಾವಳಿಯ ಸಂಭ್ರಮದಲ್ಲಿ ಮನೆ ಮನೆಗಳಲ್ಲಿ ನಿತ್ಯವೂ ರಂಗೋಲಿಯು ರಂಗು ರಂಗಾಗಲಿ

ಸ್ವರ್ಣ ಕುಂದಾಪು

   

Related Articles

error: Content is protected !!