ಪಶ್ಚಿಮ ಘಟ್ಟಗಳ ಪ್ರಶಾಂತ ರಮಣೀಯ ತಪ್ಪಲಿನಲ್ಲಿ ಗಿರಿ ಶೃಂಗಗಳ ನಿಸರ್ಗ ಮೋಹಕ ರಂಗಭೂಮಿಯ ನಡುವೆ ತುಂಗಾ ನದಿಯ ಶುದ್ಧ ಸ್ಪಟಿಕ ಜಲದಿಂದ ಪಾದ ತೊಳಿಸಿಕೊಳ್ಳುತ್ತಿರುವುದೇ ಆದಿ ಶಂಕರಾಚಾರ್ಯರಿಂದ ಸ್ಥಾಪಿತವಾಗಿರುವ ಶೃಂಗೇರಿ ಮಠ . ಇಲ್ಲಿ ವಿದ್ಯಾದೇವತೆ ಶ್ರೀ ಶಾರದಾಂಬೆ ನೆಲೆಸಿದ್ದಾಳೆ . ಶೃಂಗೇರಿಯ ಪ್ರಕೃತಿ ಸೌಂದರ್ಯವೇ ಶೃಂಗೇರಿಯ ದೇವಸ್ಥಾನಕ್ಕೆ ಮೆರಗನ್ನು ಕೊಡುತ್ತದೆ . ಶಾರದಾಂಬೆಯನ್ನು ಶೃಂಗೇರಿಯಲ್ಲಿ ನೋಡುವುದೇ ಚೆಂದ . ಶಾರದಾಂಬೆಯ ವಿಗ್ರಹವನ್ನು ನೋಡಿದ ತಕ್ಷಣ ಮನಸ್ಸಿನಲ್ಲಿ ಭಕ್ತಿ ಭಾವ ನೆಲೆಗೊಳ್ಳುತ್ತದೆ. ಶೃಂಗೇರಿ ಮಠವನ್ನು ಸುತ್ತುವರಿದಿರುವ ಪರ್ವತ ಶ್ರೇಣಿಯ ಹೆಸರು ರಿಷ್ಯ ಶೃಂಗ ಪರ್ವತ.
ಶಂಕರಾಚಾರ್ಯರಿಗೆ ಶೃಂಗೇರಿಯನ್ನು ಸ್ಥಾಪಿಸಲು ಪ್ರೇರಣೆಯನ್ನು ಕೊಟ್ಟದ್ದು ಒಂದು ಅತ್ಯಂತ ವಿಶಿಷ್ಟವಾದ ಘಟನೆ ಗರ್ಭ ಧರಿಸಿದ ಕಪ್ಪೆ ಒಂದಕ್ಕೆ ತನ್ನ ಹೆಡೆಯಿಂದ ನೆರಳು ನೀಡುತ್ತಿರುವ ಘಟಸರ್ಪ ಈ ವಿಶಿಷ್ಟ ದೃಶ್ಯವೇ ಶಂಕರಾಚಾರ್ಯರಿಗೆ ಶೃಂಗೇರಿ ಎಂಬ ಶಾರದಾಂಬೆಯ ಮಠವನ್ನು ಸ್ಥಾಪಿಸಲು ಪ್ರೇರಣೆಯನ್ನು ನೀಡಿದ್ದು. ಶಂಕರಾಚಾರ್ಯರು ತನ್ನ 32 ವರ್ಷಗಳ ವಯಸ್ಸಿನಲ್ಲಿ 12 ವರ್ಷಗಳನ್ನು ಶೃಂಗೇರಿಯಲ್ಲಿ ನೆಲೆಗೊಂಡಿದ್ದರು . ಅನೇಕ ಭಕ್ತರು ತಮ್ಮ ಮಕ್ಕಳನ್ನು ಪ್ರಥಮ ಅಕ್ಷರಭ್ಯಾಸ ಮಾಡಲು ವಿದ್ಯಾದೇವತೆ ಶಾರದಾಂಬೆಯ ಮಡಿಲಲ್ಲಿ ಮಾಡಿಸುವುದು ಇಲ್ಲಿಯ ದೇವಸ್ಥಾನದ ವೈಶಿಷ್ಟ್ಯ . ವಿದ್ಯಾದಿ ದೇವತೆ ಶಾರದಾಂಬೆ ತನ್ನ ಹಸನ್ಮುಖದಿಂದ ಭಕ್ತರಲ್ಲಿ ಸದಾ ಭಕ್ತಿ ಭಾವ ತುಂಬುವಂತೆ ಮಾಡುತ್ತಾಳೆ.
ಶಾರದಾ ಮಾತೆಯು ತನ್ನ ಹೊಳೆಯುವ ಮುಖ ಮುದ್ರೆ ಮತ್ತು ಮುಗ್ಧ ಮುಗುಳ್ನಗೆಯ ನೋಟದಿಂದ ಭಕ್ತರ ಹೃದಯಕ್ಕೆ ಆನಂದದ ಹೊಳೆಯನ್ನು ಹರಿಸುತ್ತಾಳೆ. ಶೃಂಗೇರಿಯ ಶಾರದೆಯ ದೇವಾಲಯದ ಪಕ್ಕದಲ್ಲಿರುವ ಚಂದ್ರ ಮೌಳೇಶ್ವರ ದೇವಸ್ಥಾನವು ಕೂಡ ಅತ್ಯಂತ ಪುರಾತನ ಮತ್ತು ವೈಶಿಷ್ಟ್ಯಮಯ ದೇವಾಲಯ. ಶುದ್ಧ ಸ್ಪಟಿಕ ಚಂದ್ರಮೌಳೇಶ್ವರ ಲಿಂಗದ ಮೇಲೆ ಸುಪ್ರಕಾಶಕನಾದ ಚಂದ್ರನು ಬೇರೆಲ್ಲೂ ಸಿಗದ ವಿದ್ಯಮಾನವಾಗಿದೆ. ಇದನ್ನು ವಿಶ್ವನಾಥನು ಕೈಲಾಸದಿಂದ ತಂದು ಕಾಶಿಯಲ್ಲಿ ಶ್ರೀ ಶಂಕರಾಚಾರ್ಯರಿಗೆ ಕೊಟ್ಟನೆಂಬ ಪ್ರತೀತಿ ಇದೆ
ಪ್ರದೀಪ್, ಚಿನ್ಮಯಿ ಆಸ್ಪತ್ರೆ, ಕುಂದಾಪುರ