Home » ಜೀವನ ಮೌಲ್ಯ
 

ಜೀವನ ಮೌಲ್ಯ

ನನ್ನ ಬೆಲೆ ಎಷ್ಟು?

by Kundapur Xpress
Spread the love

ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ “ನನ್ನ ಜೀವನದ ಬೆಲೆ ಏನು?” ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟು “ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ ಆದರೆ ಅದನ್ನು ನೀನು ಮಾರಬಾರದು” ಎಂದು ಹೇಳಿದನಂತೆ.ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ‘ಈ ಕಲ್ಲಿನ ಬೆಲೆ ಎಷ್ಟಿರಬಹುದು?‘ ಎಂದು ಕೇಳಿದನಂತೆ ಅದಕ್ಕಾ ಹಣ್ಣಿನ ವ್ಯಾಪಾರಿ “ಈ ಕಲ್ಲಿಗೆ ನಾನು ಒಂದು 5 ಹಣ್ಣುಗಳನ್ನು ಕೊಡುವೆ. ಮಾರುತ್ತೀಯಾ?” ಎಂದು ಕೇಳಿದನಂತೆ. ಆದರೆ ದೇವರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾನಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ ‘‘ಈ ಕಲ್ಲಿನ ಬೆಲೆ ಎಷ್ಟಿರಬಹುದು?” ಎಂದು ಕೇಳಿದನಂತೆ. “ಈ ಕಲ್ಲಿಗೆ ನಾನು ಒಂದು 10 ಕೆ ಜಿ ತರಕಾರಿಯನ್ನು ಕೊಡುವೆ ಈ ಕಲ್ಲನ್ನು ಮಾರುತ್ತೀಯಾ?” ಎಂದು ಕೇಳಿದನಂತೆ ಆದರೆ ದೇವರು ಆ ಕಲ್ಲಿನ ಬೆಲೆಯನ್ನು ಮಾತ್ರ ತಿಳಿದು ಬಾ ಎಂದು ಹೇಳಿದ್ದಾನಲ್ಲ, ಮಾರಬಾರದೆಂದೂ ಹೇಳಿದ್ದಾನಲ್ಲ, ಹಾಗಾಗಿ ಆ ವ್ಯಕ್ತಿ ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ ಇದಾದ ಮೇಲೆ ಆ ವ್ಯಕ್ತಿ ಚಿನ್ನದ ಆಭರಣಗಳ ವ್ಯಾಪಾರಿಯಲ್ಲಿ ಹೋಗಿ ‘‘ಈ ಕಲ್ಲಿನ ಬೆಲೆ ಎಷ್ಟಿರಬಹುದು?” ಎಂದು ಕೇಳಿದನಂತೆ. ಆ ಕಲ್ಲನ್ನು ನೋಡಿ, ಆಶ್ಚರ್ಯಚಕಿತನಾಗಿ ಆ ಆಭರಣಗಳ ವ್ಯಾಪಾರಿ “ಒಂದು 50 ಲಕ್ಷ ರೂಗಳನ್ನು ಕೊಡುವೆ, ನನಗೆ ಈ ಕಲ್ಲನ್ನು ಮಾರುತ್ತೀಯಾ?” ಎಂದನಂತೆ.

ಇದನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋಗುತ್ತಿರುವ ವ್ಯಕ್ತಿಗೆ “ಹೋಗಲಿ 4 ಕೋಟಿ ರೂಗಳನ್ನು ಕೊಡುತ್ತೇನೆ” ಎಂದನಂತೆ ಆ ಚಿನ್ನದ ವ್ಯಾಪಾರಿ ಆ ವ್ಯಕ್ತಿಯಲ್ಲಿ ಸ್ವಲ್ಪ ಆಸೆ ಮೂಡಿತು ಆದರೆ ಆ ಕಲ್ಲನ್ನು ಮಾರಬಾರದೆಂದು ದೇವರು ಹೇಳಿದ್ದನಲ್ಲ, ಹಾಗಾಗಿ ಆ ವ್ಯಕ್ತಿಯು, ‘ಇದನ್ನು ಮಾರುವುದಿಲ್ಲ‘ ಎಂದು ಹೇಳಿ ಮುಂದಕ್ಕೆ ಹೊರಟನಂತೆ ಕಡೆಗೆ ನಮ್ಮ ವ್ಯಕ್ತಿ ಒಬ್ಬ ‘ವಜ್ರ‘ ಗಳ ವ್ಯಪಾರಿಯಲ್ಲಿಗೆ ಹೋಗಿ  ‘‘ಈ ಕಲ್ಲಿನ ಬೆಲೆ ಎಷ್ಟಿರಬಹುದು?” ಎಂದು ಕೇಳಿದನಂತೆ ಆ ವಜ್ರದ ವ್ಯಾಪಾರಿ ಆ ಕಲ್ಲನ್ನು ಬಹುವಾಗಿ ಪರೀಕ್ಷಿಸಿ “ನಿಮಗೆ ಎಲ್ಲಿ ಸಿಕ್ಕಿತು ಇಷ್ಟು ಬೆಲೆಬಾಳುವ ಕಲ್ಲು?” ಎಂದು ಕೇಳಿದನಂತೆ. ನಾನು ನನ್ನ ಆಸ್ತಿಯನ್ನೆಲ್ಲಾ  ಅಷ್ಟೇ ಏಕೆ ನನ್ನನ್ನೇ ನಾನು ಮಾರಿಕೊಂಡರೂ ಈ ಕಲ್ಲನ್ನು ಕೊಳ್ಳಲು ಸಾಧ್ಯವಿಲ್ಲ. ……ಕಡೆಗೆ ಈ ಜಗತ್ತನ್ನೆಲ್ಲಾ ಮಾರಿದರೂ ಈ ಕಲ್ಲಿಗೆ ಬೆಲೆಕಟ್ಟಲು ಸಾಧ್ಯವಿಲ್ಲ” ಎಂದನಂತೆ

ಈ ಮಾತನ್ನು ಕೇಳಿ ನಮ್ಮ ವ್ಯಕ್ತಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ. ತಕ್ಷಣ ಆ ಕಲ್ಲನ್ನು ತೆಗೆದುಕೊಂಡು ದೇವರ ಬಳಿ ಬಂದನಂತೆ. ಆಗ ದೇವರು “ನಿನ್ನ ಜೀವನದ ಬೆಲೆ ಎಷ್ಟು ಎಂದು ಕೇಳಿದೆಯಲ್ಲಾ!!! ನೋಡು ನೀನು ಮೊದಲು ಈ ಕಲ್ಲನ್ನು ಹಣ್ಣಿನ ವ್ಯಾಪಾರಿಯ ಬಳಿ, ನಂತರ ತರಕಾರಿ ವ್ಯಾಪಾರಿಯ ಬಳಿ, ಬಳಿಕ ಚಿನ್ನದ ಆಭರಣಗಳ ವರ್ತಕನ ಬಳಿ ಕೊಂಡು ಹೋಗಿ ತೋರಿಸಿದಾಗ ಅವರುಗಳು ತಮ್ಮ ತಮ್ಮ ಯೋಗ್ಯತೆಗನುಸಾರ ಈ ಕಲ್ಲಿಗೆ ಬೆಲೆ ಕಟ್ಟಿದರು.ಆದರೆ ಆ ಕಲ್ಲಿನ ನಿಜವಾದ ಬೆಲೆ ಗೊತ್ತಿದ್ದ ವಜ್ರದ ವ್ಯಾಪಾರಿಗೂ ಕೂಡ ಆ ಕಲ್ಲಿಗೆ ಬೆಲೆ ಕಟ್ಟಲಾಗಲಿಲ್ಲ, ಅಲ್ಲವೇ? ಹಾಗೆಯೇ ನಿನಗೂ ಕೂಡ ಬೆಲೆ ಕಟ್ಟಲಾಗುವುದಿಲ್ಲ, ನಿನ್ನ ಜೀವನವೂ ‘ಅಮೂಲ್ಯ‘ ಎಂದರೆ ಬೆಲೆಕಟ್ಟಲಾಗದ್ದು. ಆದರೆ ಮನುಷ್ಯರು ಅವರವರ ಯೋಗ್ಯತೆಗೆ ಅನುಸಾರವಾಗಿ ನಿನಗೆ ಬೆಲೆ ಕಟ್ಟುತ್ತಾರೆ.ಈ ಜಗತ್ತಿನ ಪ್ರತೀ ವಸ್ತುವಿಗೂ ಮಾನವರು ಆ ವಸ್ತು ತಮಗೆ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆ ಅದಕ್ಕೆ ಬೆಲೆಕಟ್ಟುತ್ತಾರೆ. ನಿನಗೂ ಹಾಗೆ!! ಆದರೆ ಅದು ನಿನ್ನ ಜೀವನದ ನಿಜವಾದ ಬೆಲೆಯಲ್ಲ. ಅದು ಅವರುಗಳು ಅವರ ಉಪಯೋಗ, ಅನುಕೂಲ ಮತ್ತು ಯೋಗ್ಯತೆಗನುಸಾರ ಕಟ್ಟುವ ಬೆಲೆ. ಅವರು ಕಟ್ಟುವ ಬೆಲೆ ಕೇವಲ ಅವರ ಯೋಗ್ಯತೆಯನ್ನು ತೋರಿಸುತ್ತದೆ. ಆದರೆ, ನಿನ್ನ ಬೆಲೆ ಮತ್ತು ಮೌಲ್ಯ ನನಗೊಬ್ಬನಿಗೇ ಗೊತ್ತು.ನೀನು ನನಗೆ ಎಂದೆಂದಿಗೂ ಅತ್ಯಮೂಲ್ಯ. ನಿನ್ನ ಜೀವನಕ್ಕೆ ಬೆಲೆಕಟ್ಟಲು ನನ್ನಿಂದಾಗುವುದಿಲ್ಲ” ಎಂದನಂತೆ ಆ ದೇವರೂ ಸಹ. ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು “ಮಾನವ ಜನ್ಮ ಬಹು ಶ್ರೇಷ್ಠವಾದದ್ದು” ಎಂದು. ಹಾಗಾಗಿ ನಾವು ನಮ್ಮನ್ನು ನಾವೇ ಅಪಮೌಲ್ಯ ಮಾಡಿಕೊಳ್ಳಬಾರದು ಮತ್ತು ನಮ್ಮ ಅಲ್ಪ ಮತಿಯಿಂದ ಅನ್ಯರಿಗೆ ಬೆಲೆ ಕಟ್ಟಲೂ ಬಾರದು         ಸ್ವರ್ಣ ಕುಂದಾಪುರ

   

Related Articles

error: Content is protected !!