ಬೆಂಗಳೂರು : ಸೋಮವಾರ ಪ್ರಾಣಪ್ರತಿಷ್ಠಾಪಿತನಾದ ಅಯೋಧ್ಯೆ ಶ್ರೀರಾಮನ ವಿಗ್ರಹವನ್ನು ಮಂಗಳವಾರ ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ. ಆದರೆ ಮೊದಲ ದಿನವೇ ರಾಮನ ದರ್ಶನ ಮಾಡಿ ಕಣ್ಣುಂಬಿಕೊಳ್ಳಲು ಲಕ್ಷಾಂತರ ಭಕ್ತರು ಅಯೋಧ್ಯೆಗೆ ನುಗ್ಗಿ ಬಂದ ಕಾರಣ, ಭಾರಿ ನೂಕುನುಗ್ಗಲು ಉಂಟಾಗಿದೆ. ಇದೇ ವೇಳೆ ಜನಸಂದಣಿ ನಿಯಂತ್ರಿಸಲಾಗದೇ ಉತ್ತರ ಪ್ರದೇಶ ಪೊಲೀಸರು ಸುಸ್ತಾಗಿ ಹೋಗಿದ್ದು, ಸದ್ಯಕ್ಕೆ ಅಯೋಧ್ಯೆಯತ್ತ ಬರಬೇಡಿ ಎಂದು ಜನತೆಗೆ ಮನವಿ ಮಾಡಿದ್ದಾರೆ
ಇನ್ನು ಭಕ್ತರ ಸಂದಣಿ ನಿಯಂತ್ರಿಸಲು ರಾಮಮಂದಿರಕ್ಕೆಂದೇ ಒಬ್ಬ ಐಎಎಸ್ ದರ್ಜೆಯ ಮ್ಯಾಜಿಸ್ಟ್ರೇಟರನ್ನು ನೇಮಿಸಲಾಗಿದೆ. ಮೊದಲ ದಿನ ಮಧ್ಯಾಹ್ನದ ವೇಳೆಗೆ ಸುಮಾರು 2.5ರಿಂದ 3 ಲಕ್ಷ ಜನರು ದರ್ಶನ ಮಾಡಿದ್ದು, ರಾತ್ರಿ ವೇಳೆ ಅಂದಾಜು 5 ಲಕ್ಷ ಭಕ್ತರು ಮೊದಲ ದಿನ ರಾಮಲಲ್ಲಾ ದರ್ಶನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ