Home » ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಸಂಭ್ರಮದ ದೀಪೋತ್ಸವ ಆಚರಣೆ
 

ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಸಂಭ್ರಮದ ದೀಪೋತ್ಸವ ಆಚರಣೆ

by Kundapur Xpress
Spread the love

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಡಿಸೆಂಬರ್ ಒಂದರ ಭಾನುವಾರ ಕಾರ್ತಿಕ ಅಮಾವಾಸ್ಯೆಯ ಪರ್ವಕಾಲದಂದು ದೀಪೋತ್ಸವ ಮಹೋತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ನೆರವೇರಿತು.ಆ ಪ್ರಯುಕ್ತ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಸಾಯಂಕಾಲ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ವಿಶೇಷ ಅಲಂಕೃತ ದೀಪಸ್ತಂಭದಲ್ಲಿ ಶ್ರೀ ಗುರೂಜಿಯವರು ದೀಪ ಪ್ರಜ್ವಲಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು..
ಕ್ಷೇತ್ರದ ಒಳಾಂಗಣ ಹಾಗೂ ಹೊರಾಂಗಣ ವನ್ನು ಹಣತೆ ದೀಪಗಳಿಂದ ಕಣ್ಮಣ ಸೆಳೆಯುವಂತೆ ಅಲಂಕರಿಸಲಾಗಿತ್ತು.. ಶ್ರೀ ಕ್ಷೇತ್ರದ ಆದಿಶಕ್ತಿ ಸಭಾಭವನದಲ್ಲಿ ರಚಿಸಲಾದ ನವಧಾನ್ಯ ಸಹಿತವಾದ ಚಿತ್ತಾರದ ದೀಪ, ನಾಣ್ಯ ಗಳಿಂದ ರಚಿಸಲಾದ ಗಣಪತಿ ದೀಪ, ವಿವಿಧ ಪತ್ರೆಗಳಿಂದ ಹಾಗೂ ಹೂವುಗಳಿಂದ ರಚಿಸಲಾದ ಪುಕಲಂ ದೀಪಗಳು, ಹಣತೆಯಿಂದ ರಚಿಸಲಾದ ಕ್ಷೇತ್ರದ ನಾಮದೀಪಗಳು, ಭಕ್ತರಿಗೆ ವಿಶೇಷ ಆಕರ್ಷಣೆಯಾ ಯಿತು.ಶ್ರೀ ಕ್ಷೇತ್ರದ ಗುರು ಪೀಠವಾದ ಗಾಯತ್ರಿ ಧ್ಯಾನಪೀಠದ ಶ್ರೀ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ ದೀಪ ಬೆಳಗಿಸಲಾಯಿತು.. ನಂತರ ಕ್ರಮಬದ್ಧವಾಗಿ ಶ್ರೀ ಕ್ಷೇತ್ರದ ನಾಗಾಲಯ ಹಾಗೂ ಷಟ್ ಶಿರ ಸುಬ್ರಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಕ್ಷೇತ್ರದ ಕಪಿಲ ಗೋ ಮಂದಿರದಲ್ಲಿಯೂ ಕೂಡ ದೀಪ ಪ್ರಜ್ವಲಿಸಲಾಯಿತು
ನಂತರ ಶ್ರೀ ಆದಿಶಕ್ತಿಯ ಸನ್ನಿಧಾನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಅನಿಶ್ ಆಚಾರ್ಯರು ರಂಗ ಪೂಜೆಯನ್ನು ನೆರವೇರಿಸಿದರು. ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ದೀಪ ಮಾತೆಯಾಗಿ ಕ್ಷೇತ್ರದ ಅಲಂಕಾರ ತಜ್ಞ ಆನಂದ್ ಬಾಯರಿ ಅವರು ಅಲಂಕರಿಸಿದ್ದರು. ಸ್ವಸ್ತಿಕ್ ಆಚಾರ್ಯ ಅವರು ಸಹಕರಿಸಿದರು.

ಕಿಕ್ಕಿರಿದು ತುಂಬಿದ ಭಕ್ತರ ಸಾಕಾರದೊಂದಿಗೆ ಕ್ಷೇತ್ರದ ಪರಿಸರ ದೀಪಮಯವಾಗಿತ್ತು. ಕ್ಷೇತ್ರದ ಮಹಾಪ್ರಸಾದವಾದ ಅನ್ನಪ್ರಸಾದ ಮಧ್ಯಾಹ್ನ ಹಾಗೂ ರಾತ್ರಿ ವಿವಿಧ ಭಕ್ಷ್ಯ ಭೋಜ್ಯಗಳೊಂದಿಗೆ ಉಣಬಡಿಸಲಾಯಿತು. ಭಕ್ತರ ಎಲ್ಲರೂ ಅತಿ ಉತ್ಸಾಹದಿಂದ ಈ ಮಹೋತ್ಸವದಲ್ಲಿ ಪಾಲ್ಗೊಂಡು ಯಶಸ್ಸಿಗೆ ಕಾರಣರಾದರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.

 

Related Articles

error: Content is protected !!