ಉಡುಪಿ : ಕೃಷ್ಣಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ವಾರ್ಷಿಕ ಸಪ್ತೋತ್ಸವವು ಗುರುವಾರ ಆರಂಭವಾಯಿತು. ಜ.15ರ ವರೆಗೆ 7 ದಿನ ಈ ಉತ್ಸವವು ಅತ್ಯಂತ ವೈಭವದಿಂದ ನಡೆಯಲಿದೆ.
ಸುಮಾರು 8 ಶತಮಾನಗಳ ಹಿಂದೆ ಮಕರ ಸಂಕ್ರಮಣದ ಪವಿತ್ರ ಸಂದರ್ಭದಂದು ಜಗದ್ಗುರು. ಶ್ರೀಮನ್ಮದ್ವಾಚಾರ್ಯರು ದ್ವಾರಕೆಯಿಂದ ಬಂದ ಶ್ರೀ ಕೃಷ್ಣನನ್ನು ಭಕ್ತರಿಗಾಗಿ ಉಡುಪಿಯಲ್ಲಿ ಪ್ರತಿಷ್ಠಾಪಿಸಿದ್ದರು. ಈ ಪ್ರಯುಕ್ತ ಈ 7 ದಿನಗಳ ಉತ್ಸವವನ್ನು ವೈವಿಧ್ಯಮಯ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಗುತ್ತದೆ
ಗುರುವಾರ ರಾತ್ರಿ ರಥಬೀದಿಯಲ್ಲಿ ವೈಭವಪೂರ್ಣ ರಥೋತ್ಸವ ನಡೆಯಿತು. ಈ ಸಂದರ್ಭ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಹಾಗೂ ಭಂಡಾರಕೇರಿ ಮಠದ ಶ್ರೀ ವಿದ್ವೇಶ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು
ಉತ್ಸವದಲ್ಲಿ ಸಾವಿರಾರು ಮಂದಿ ಭಕ್ತಾಭಿಮಾನಿಗಳು ಭಕ್ತಿಶ್ರದ್ಧೆಯಿಂದ ಭಾಗವಹಿಸಿದ್ದರು. ಇದಕ್ಕೆ ಮೊದಲು ಮಧ್ವಸರೋವರದಲ್ಲಿ ಕೃಷ್ಣನಿಗೆ ವಿಜೃಂಭಣೆಯ ತೆಪ್ಪೋತ್ಸವವನ್ನು ನಡೆಸಲಾಯಿತು. ಪುತ್ತಿಗೆ ಕಿರಿಯ ಶ್ರೀಗಳು ಮಧ್ವಮಂಟಪದಲ್ಲಿ ಕೃಷ್ಣನಿಗೆ ಚಿನ್ನದ ತೊಟ್ಟಿಲು ಸೇವೆ ನೆರವೇರಿಸಿದರು